Sunday 27 December 2015

ಸುಲ್ತಾನಾಳ ಕನಸು - ಬೇಗಂ ರುಖಿಯಾ ಶೇಖಾವತ್ ಹುಸೇನ್

 

(ಚಿತ್ರ: ಪ್ಯಾಬ್ಲೋ ಪಿಕಾಸೋ)

ಒಂದು ಸಂಜೆ ನಮ್ಮ ಬೆಡ್‌ರೂಮಿನ ಆರಾಮ ಕುರ್ಚಿಯಲ್ಲಿ ಕೂತು ಭಾರತದ ಹೆಣ್ತನದ ಸ್ಥಿತಿಗತಿ ಕುರಿತು ಸೋಂಬೇರಿಯಂತೆ ಯೋಚಿಸುತ್ತ ಇದ್ದೆ. ನಾನು ತೂಕಡಿಸಿದೆನೋ ಇಲ್ಲವೋ ಸರಿಯಾಗಿ ಗೊತ್ತಿಲ್ಲ. ಆದರೆ ನನಗೆ ನೆನಪಿರುವ ಮಟ್ಟಿಗೆ ಎಚ್ಚರಾಗಿಯೇ ಇದ್ದೆ. ಬೆಳದಿಂಗಳ ಆಗಸದಲ್ಲಿ ಸಾವಿರಾರು ಚಿಕ್ಕೆಗಳು ವಜ್ರದಂತೆ ಸ್ಪಷ್ಟವಾಗಿ ಹೊಳೆಯುತ್ತಿದ್ದವು.

ಇದ್ದಕ್ಕಿದ್ದಂತೆ ಒಬ್ಬ ಹೆಂಗಸು ನನ್ನೆದುರು ನಿಂತಳು; ಅವಳು ಒಳಗೆ ಹೇಗೆ ಬಂದಳೋ ಗೊತ್ತಿಲ್ಲ. ಅವಳು ನನ್ನ ಗೆಳತಿ ಸಿಸ್ಟರ್ ಸಾರಾ.

‘ಶುಭ ಮುಂಜಾವು’ ಎಂದಳು ಸಾರಾ. ಅದು ಬೆಳಿಗ್ಗೆಯಲ್ಲ, ನಕ್ಷತ್ರಭರಿತ ರಾತ್ರಿ. ನಾನು ಒಳಗೊಳಗೇ ನಕ್ಕೆ. ಆದರೂ ‘ಹೇಗಿದೀ?’ ಎಂದೆ.

‘ನಾನು ಆರಾಮ. ಹೊರಬಂದು ನಮ್ಮ ಕೈದೋಟವನ್ನೊಮ್ಮೆ ನೋಡುತ್ತೀಯಾ?’ ಎಂದಳು.

ಅಷ್ಟೊತ್ತಿನಲ್ಲಿ ಹೊರ ಹೋಗಲು ಕಷ್ಟವೇನೂ ಇರಲಿಲ್ಲ, ಆದರೂ ಕಿಟಕಿಯಿಂದ ಹೊರಗೆ ಚಂದ್ರನತ್ತ ನೋಡಿದೆ. ಹೇಗಿದ್ದರೂ ಪುರುಷ ಸೇವಕರು ಗಾಢ ನಿದ್ದೆಯಲ್ಲಿರುತ್ತಾರೆ, ಸಿಸ್ಟರ್ ಸಾರಾ ಜೊತೆ ಆರಾಮಾಗಿ ಅಡ್ಡಾಡಿಬರಬಹುದು ಎನಿಸಿತು.

ನಾವು ಡಾರ್ಜಿಲಿಂಗಿನಲ್ಲಿದ್ದಾಗ ಹೀಗೇ ಒಟ್ಟೊಟ್ಟಿಗೆ ವಾಕಿಂಗಿಗೆ ಹೋಗುತ್ತಿದ್ದೆವು. ಅಲ್ಲಿನ ಬೊಟಾನಿಕಲ್ ಗಾರ್ಡನಿನಲ್ಲಿ ಕೈಕೈ ಹಿಡಿದು ಗಟ್ಟಿಯಾಗಿ ಏನೇನೋ ಹರಟುತ್ತ ನಡೆದದ್ದು ನೆನಪಾಯಿತು. ನನ್ನನ್ನು ಅಂಥ ಎಲ್ಲಿಗೋ ಕರೆದೊಯ್ಯಲೆಂದೇ ಇವಳು ಹೀಗೆ ಕೇಳುತ್ತಿರಬಹುದು ಎನಿಸಿ ಅವಳ ಬೇಡಿಕೆಗೆ ಒಪ್ಪಿಕೊಂಡೆ.

ನಡೆಯುವಾಗ ನೋಡುತ್ತೇನೆ, ಆಗಲೇ ಬೆಳಗಾಗಿದೆ! ಶಹರ ಎಚ್ಚೆತ್ತಿದೆ, ಬೀದಿಗಳು ಗಿಜಿಗಿಜಿಯೆಂದು ಜನರಿಂದ ತುಂಬಿ ತುಳುಕುತ್ತಿವೆ. ನನಗೆ ಸಿಕ್ಕಾಪಟ್ಟೆ ಸಂಕೋಚವಾಯಿತು, ಏಕೆಂದರೆ ಪರ್ದಾ ಇಲ್ಲದೆ ಹಾಡಹಗಲೇ ಬೀದಿಯಲ್ಲಿ ನಡೆಯುತ್ತಿದ್ದೇನೆ. ಆದರೆ ಸದ್ಯ, ಒಬ್ಬೇಒಬ್ಬ ಪುರುಷನೂ ಎದುರು ಸಿಗಲಿಲ್ಲ. 

ದಾರಿಹೋಕರು ಕೆಲವರು ನನಗೆ ತಮಾಷೆ ಮಾಡಿದರು. ಅವರ ಭಾಷೆ ನನಗರ್ಥವಾಗುತ್ತಿರಲಿಲ್ಲ. ಆದರೂ ಅವರು ತಮಾಷೆ ಮಾಡುತ್ತಿದ್ದಾರೆಂದು ಮಾತ್ರ ಅರ್ಥವಾಯಿತು. ಅವರೇನು ಹೇಳುತ್ತಿರುವುದೆಂದು ಗೆಳತಿಯ ಬಳಿ ಕೇಳಿದೆ:

‘ನೀನು ತುಂಬ ಗಂಡುಬೀರಿಯಂತೆ ಕಾಣುವಿ ಎಂದು ಹೆಂಗಸರು ಹೇಳುತ್ತಿದ್ದಾರೆ.’ 

‘ಗಂಡುಬೀರಿ? ಹಾಗೆಂದರೇನು?’

‘ಎಂದರೆ ನೀನು ಗಂಡಸರಂತೆ ನಾಚಿಕೆ ಮತ್ತು ಮೃದು ಸ್ವಭಾವದವಳಂತೆ ಕಾಣುತ್ತೀ ಎನ್ನುತ್ತಿದ್ದಾರೆ.’ 

‘ಗಂಡಸರಂತೆ ನಾಚಿಕೆ ಮತ್ತು ಮೃದು ಸ್ವಭಾವದವಳೇ?’ ಅವಳೆಡೆ ತಿರುಗಿ ನೋಡಿದರೆ ಜೊತೆಯಿದ್ದವಳು ಸಾರಾ ಆಗಿರದೇ ಬೇರಿನ್ನಾರೋ ಒಬ್ಬಳು ಅಪರಿಚಿತೆ ಆಗಿರುವುದು ನೋಡಿ ನನಗೆ ತುಂಬ ಭಯವಾಯಿತು. ಎಂಥ ಮೂರ್ಖಳು ನಾನು, ಈ ಹೆಂಗಸನ್ನು ನನ್ನ ಹಳೆಯ ದಿನಗಳ ಪ್ರಿಯಗೆಳತಿ ಸಾರಾ ಎಂದು ತಪ್ಪಾಗಿ ಗುರ್ತಿಸಿದೆನಲ್ಲ?

ನಾವಿಬ್ಬರೂ ಕೈಕೈ ಹಿಡಿದು ನಡೆಯುತ್ತಿದ್ದುದರಿಂದ ಹೆದರಿ ನನ್ನ ಕೈ ನಡುಗುವುದನ್ನು ಅವಳು ಗುರುತಿಸಿದಳು. ‘ಯಾಕೆ ಏನಾಯಿತು ಗೆಳತಿ?’ ಪ್ರೀತಿಯಿಂದ ಕೇಳಿದಳು. ‘ಒಂದು ರೀತಿ ವಿಲಕ್ಷಣ ಎನಿಸುತ್ತಿದೆ’, ತಪ್ಪೊಪ್ಪಿಕೊಳ್ಳುವವರಂತೆ ಹೇಳಿದೆ: ‘ನನಗೆ ಪರ್ದಾನಶೀನ್ ರೂಢಿ, ಹೀಗೆ ಬೀದಿಯಲ್ಲಿ ಬುರ್ಖಾ ಇಲ್ಲದೇ ನಡೆಯುವುದು ರೂಢಿಯಿಲ್ಲ.’

‘ಯಾರಾದರೂ ಗಂಡಸರು ಎದುರು ಬಂದಾರೆಂದು ನೀನು ಭಯಪಡಬೇಕಿಲ್ಲ. ಇದು ಮಹಿಳಾ ರಾಜ್ಯ. ದುಷ್ಟತನ ಮತ್ತು ಪಾಪ ಮುಕ್ತ ರಾಜ್ಯ. ನೀತಿಯೇ ಇಲ್ಲಿ ರಾಜ್ಯವಾಳುತ್ತದೆ.’

ಅಂದಹಾಗೆ ಸುತ್ತಮುತ್ತಿನ ದೃಶ್ಯ ನನಗೆ ಬಹಳ ಖುಷಿ ಕೊಡುತ್ತಿದ್ದವು. ನಿಜಕ್ಕೂ ತುಂಬ ಸುಂದರವಾಗಿತ್ತು. ಹಸಿರು ಹುಲ್ಲನ್ನು ನಾನು ವೆಲ್ವೆಟ್ ನೆಲಹಾಸೆಂದು ಭಾವಿಸಿದೆ. ಯಾವುದೋ ಮೆತ್ತನೆ ರತ್ನಗಂಬಳಿ ಮೇಲೆ ನಡೆಯುತ್ತಿರುವಂತೆನಿಸಿ ಬಗ್ಗಿ ನೋಡಿದೆ, ಹಾದಿ ಮೇಲೆ ಪಾಚಿ ಮತ್ತು ಹೂಗಳು ಹರಡಿದ್ದವು.

‘ಎಷ್ಟು ಚೆನ್ನಾಗಿದೆ ಅಲ್ವಾ ಇದು?’ ಎಂದೆ.

‘ನಿನಗಿಷ್ಟವಾಯಿತೆ?’ ಎಂದಳು ಸಿಸ್ಟರ್ ಸಾರಾ. ನಾನವಳನ್ನು ಸಿಸ್ಟರ್ ಸಾರಾ ಅನ್ನುತ್ತಲೇ ಇದ್ದೆ, ಅವಳು ನನಗೆ ನನ್ನ ಹೆಸರು ಹಿಡಿದೇ ಕರೆಯುತ್ತಿದ್ದಳು.

‘ಹೌದು, ತುಂಬ ಇಷ್ಟವಾಯಿತು. ಆದರೆ ನನಗೆ ಮೃದುವಾದ ಸವಿಯಾದ ಹೂಗಳ ಮೇಲೆ ನಡೆಯುವುದು ಇಷ್ಟವಿಲ್ಲ.’

‘ಯೋಚನೆ ಮಾಡಬೇಡ ಪ್ರಿಯ ಸುಲ್ತಾನಾ, ನೀನು ನಡೆಯುವುದರಿಂದ ಆ ಹೂವುಗಳಿಗೆ ಹಾನಿಯಾಗುವುದಿಲ್ಲ. ಅವು ಬೀದಿಯ ಹೂಗಳು.’

‘ಇಡೀ ಊರು ತೋಟದಂತೆ ಕಾಣುತ್ತಿದೆ. ತುಂಬ ಕೌಶಲಪೂರ್ಣವಾಗಿ ಗಿಡಮರಗಳನ್ನು ನೆಟ್ಟಿದ್ದೀರಿ.’

‘ನಿಮ್ಮ ಕಲಕತ್ತಾ ಇದಕ್ಕಿಂತ ಒಳ್ಳೆಯ ತೋಟವಾಗಬಹುದು, ನಿಮ್ಮ ದೇಶಬಾಂಧವರು ಹಾಗಾಗಬೇಕೆಂದು ಬಯಸಿದ್ದೇ ಆದರೆ.’

‘ಅವರಿಗೆ ಚಿಂತನೆ ನಡೆಸಲು ಬೇಕಾದಷ್ಟು ವಿಷಯ ಇರುವಾಗ ಕೈತೋಟ ಕುರಿತು ಯೋಚಿಸುವುದು ಕಾಲಹರಣವೆಂದೇ ಅವರು ಭಾವಿಸುತ್ತಾರೆ.’

‘ಅವರಿಗೆ ಅದಕ್ಕಿಂತ ದೊಡ್ಡ ನೆಪ ಸಿಗುವುದಿಲ್ಲವಲ್ಲ, ಅದಕ್ಕೆ’ ಎಂದು ನಗುತ್ತ ಹೇಳಿದಳು.

ಗಂಡಸರೆಲ್ಲ ಎಲ್ಲಿದ್ದಾರೊ ಎಂದು ತುಂಬ ಕುತೂಹಲವಾಯಿತು. ನಡೆಯುವಾಗ ನೂರಕ್ಕೂ ಮಿಕ್ಕಿ ಮಹಿಳೆಯರನ್ನು ಭೇಟಿಯಾದೆ, ಆದರೆ ಒಬ್ಬ ಗಂಡಸೂ ಕಂಡಿರಲಿಲ್ಲ.

‘ಗಂಡಸರೆಲ್ಲ ಎಲ್ಲಿದ್ದಾರೆ?’ ಎಂದೆ.

‘ಎಲ್ಲಿರಬೇಕೋ ಅಲ್ಲಿ, ಅವರವರಿಗೆ ಸೂಕ್ತ ಜಾಗದಲ್ಲಿ.’

‘ಅವರವರ ಜಾಗದಲ್ಲಿ ಎಂದರೆ ಎಲ್ಲಿ ಎಂದು ದಯವಿಟ್ಟು ಹೇಳು.’

‘ಓ, ನಂದೇ ತಪ್ಪು. ನೀನಿಲ್ಲಿಗೆ ಎಂದೂ ಬಂದವಳಲ್ಲವಾದ್ದರಿಂದ ನಿನಗೆ ನಮ್ಮ ಪದ್ಧತಿ ಅರ್ಥವಾಗಲ್ಲ. ನಾವು ನಮ್ಮ ಗಂಡಸರನ್ನು ಮನೆಯೊಳಗೆ ಕೂಡಿ ಹಾಕಿದ್ದೇವೆ.’

‘ನಮ್ಮನ್ನು ಜೆನಾನಾದಲ್ಲಿ ಇಟ್ಟ ಹಾಗೆಯೇ?’

‘ಹಾಂ, ಸರಿಯಾಗಿ ಹಾಗೆಯೇ.’

‘ಏನು ತಮಾಷೆ ಅಲ್ವ?’ ನನಗೆ ತಡೆಯಲಾಗದ ನಗು ಬಂತು. ಸಿಸ್ಟರ್ ಸಾರಾ ಕೂಡಾ ನಕ್ಕಳು. 

‘ಆದರೆ ಪ್ರಿಯ ಸುಲ್ತಾನಾ, ನಿರಪಾಯಕಾರಿ ಹೆಂಗಸರನ್ನು ಕೂಡಿಹಾಕಿ ಗಂಡಸರನ್ನು ಹೊರಬಿಡುವುದು ಎಷ್ಟೊಂದು ಅನ್ಯಾಯ ಅಲ್ಲವೆ?’

‘ಯಾಕೆ? ಜೆನಾನಾದ ಹೊರಗೆ ಬರುವುದು ಹೆಂಗಸರಿಗೆ ಅಷ್ಟು ಸುರಕ್ಷಿತವಲ್ಲ, ಯಾಕೆಂದರೆ ನಾವು ಹುಟ್ಟಾ ಅಬಲೆಯರು.’

‘ಹೌದು, ಎಲ್ಲಿಯವರೆಗೆ ಬೀದಿಗಳಲ್ಲಿ ಗಂಡಸರಿರುತ್ತಾರೋ ಅಲ್ಲಿಯವರೆಗೆ ಅದು ಸುರಕ್ಷಿತವಲ್ಲ, ಸಂತೆಗೆ ಕಾಡುಪ್ರಾಣಿ ನುಗ್ಗಿದರೂ ಸುರಕ್ಷಿತವಲ್ಲ.’

‘ಹೌದೌದು, ಸುರಕ್ಷಿತವಲ್ಲ.’

‘ಒಂದುವೇಳೆ ಒಬ್ಬ ಹುಚ್ಚ ಹುಚ್ಚರ ಆಶ್ರಮದಿಂದ ತಪ್ಪಿಸಿಕೊಂಡು ಬಂದು ಮನುಷ್ಯರಿಗೆ, ಕುದುರೆಗಳಿಗೆ, ಉಳಿದ ಜೀವಿಗಳಿಗೆ ತೊಂದರೆ ಕೊಡುತ್ತಿದ್ದ ಎಂದಿಟ್ಟುಕೊ. ಆಗ ನಿನ್ನ ದೇಶವಾಸಿಗಳು ಏನು ಮಾಡುತ್ತಾರೆ?’

‘ಅವರನ್ನು ಹಿಡಿಯಲು ಪ್ರಯತ್ನಿಸಿ ಅವರ ಆಶ್ರಮಕ್ಕೇ ಒಯ್ದು ಬಿಟ್ಟುಬರುತ್ತಾರೆ.’

‘ಧನ್ಯವಾದ. ಹುಚ್ಚರಲ್ಲದವರನ್ನು ಆಶ್ರಮದಲ್ಲಿಟ್ಟು, ಹುಚ್ಚರನ್ನು ಬೀದಿಯಲ್ಲಿ ತಿರುಗಲು ಬಿಡುವುದು ಜಾಣತನ ಅಲ್ಲ ಅಲ್ಲವೆ?’

‘ಖಂಡಿತ, ಅಲ್ಲ’ ನಾನು ನಸು ನಗುತ್ತ ಹೇಳಿದೆ.

‘ಹ್ಞಾಂ, ವಾಸ್ತವವಾಗಿ ನಿನ್ನ ದೇಶದಲ್ಲಿ ಇದೇ ಆಗುತ್ತಿರುವುದು. ಒಂದಲ್ಲ ಒಂದು ತರಲೆ ಮಾಡುವ ಅಥವಾ ಅಂತಹ ತರಲೆಗಳ ನಿಲ್ಲಿಸಲಾರದ ಗಂಡಸರನ್ನು ಸ್ವೇಚ್ಛೆಯಾಗಿ ತಿರುಗಲು ಬಿಡಲಾಗಿದೆ. ಮುಗ್ಧ ಹೆಣ್ಣುಮಕ್ಕಳನ್ನು ಜೆನಾನಾದಲ್ಲಿ ಕೂಡಿಹಾಕಲಾಗಿದೆ. ಮುಕ್ತವಾಗಿ ಹೊರಗಿರಲು ತರಬೇತಿಯೇ ಇಲ್ಲದ ಗಂಡಸರನ್ನು ನಂಬುವುದಾದರೂ ಹೇಗೆ?’

‘ನಮ್ಮ ಸಮಾಜದ ಆಗುಹೋಗುಗಳಲ್ಲಿ ಕೈಹಾಕಲು ನಮಗೆ ಯಾವ ಅವಕಾಶವೂ ಇಲ್ಲ. ಭಾರತದಲ್ಲಿ ಪುರುಷನೇ ದೇವರು ಮತ್ತು ಯಜಮಾನ. ಅವ ಎಲ್ಲ ಅವಕಾಶ, ಅಧಿಕಾರವನ್ನು ತಾನೇ ತೆಗೆದುಕೊಂಡು ಹೆಂಗಸರನ್ನು ಜೆನಾನಾದಲ್ಲಿ ಕೂಡಿಹಾಕಿದ್ದಾನೆ.’

ಅಷ್ಟೊತ್ತಿಗೆ ಸಿಸ್ಟರ್ ಸಾರಾ ಮನೆಯನ್ನು ಮುಟ್ಟಿದೆವು. ಅದು ಹೃದಯ ಆಕಾರದ ಕೈದೋಟದಲ್ಲಿತ್ತು. ಅದು ಕಬ್ಬಿಣದ ಛಾವಣಿಯಿಂದ ಕಟ್ಟಿದ ಬಂಗಲೆ. ಉಳಿದ ಸಿರಿವಂತರ ಬಂಗಲೆಗಳಿಗಿಂತ ಚೆನ್ನಾಗಿ, ತಂಪಾಗಿ ಇತ್ತು. ಅದು ಎಷ್ಟು ನೀಟಾಗಿ, ಚಂದವಾಗಿ, ಪೀಠೋಪಕರಣಗಳಿಂದ ಎಷ್ಟು ಅಲಂಕೃತವಾಗಿ ಇತ್ತೆಂದು ವರ್ಣಿಸಲೇ ಆಗುವುದಿಲ್ಲ.

ಪಕ್ಕಪಕ್ಕ ಕುಳಿತೆವು. ಒಳಗಿನಿಂದ ಎಂಬ್ರಾಯಿಡರಿ ಕೆಲಸದ ಒಂದು ಬಟ್ಟೆ ತಂದು ಹೊಸ ವಿನ್ಯಾಸ ಮೂಡಿಸಿ ಎಂಬ್ರಾಯಿಡರಿ ಮಾಡತೊಡಗಿದಳು.

‘ನಿನಗೆ ಹೆಣಿಗೆ ಮತ್ತು ಹೊಲಿಗೆ ಬರುತ್ತದೆಯೆ ಸುಲ್ತಾನಾ?’

‘ಹೌದು, ನಮಗೆ ಜೆನಾನಾದಲ್ಲಿ ಮಾಡಲು ಅದನ್ನು ಬಿಟ್ಟರೆ ಬೇರೆ ಕೆಲಸವಿಲ್ಲ.’

‘ಆದರೆ ನಮ್ಮ ಜೆನಾನಾದವರು ಎಂಬ್ರಾಯಿಡರಿ ಮಾಡುವರೆನ್ನುವ ಯಾವುದೇ ಭರವಸೆಯಿಲ್ಲ ನಮಗೆ!’ ಜೋರಾಗಿ ನಗುತ್ತ ಹೇಳಿದಳು. ‘ಗಂಡಸರಿಗೆ ಸೂಜಿಕಣ್ಣಿನಲ್ಲಿ ದಾರ ತೂರಿಸುವಷ್ಟೂ ಸಹನೆಯೇ ಇಲ್ಲ!’

ಅಲ್ಲಿ ಟೀಪಾಯಿಯ ಮೇಲೆ ಹರಡಿದ್ದ ಹಲವು ಎಂಬ್ರಾಯಿಡರಿ ಬಟ್ಟೆಗಳತ್ತ ತೋರಿಸಿ, ‘ಇವನ್ನೆಲ್ಲ ನೀನೇ ಮಾಡಿದೆಯಾ?’ ಎಂದು ಕೇಳಿದೆ.

‘ಹೌದು.’

‘ಇವನ್ನೆಲ್ಲ ಮಾಡಲು ನಿನಗೆ ಸಮಯವಾದರೂ ಹೇಗೆ ಸಿಕ್ಕಿತು? ನೀನು ಕಚೇರಿ ಕೆಲಸವನ್ನೂ ಮಾಡುತ್ತಿರುವೆ, ಅಲ್ಲವೆ?’

‘ಹೌದು. ಆದರೆ ನಾನು ಇಡಿಯ ದಿನ ಕಚೇರಿಗೆ ಅಂಟಿ ಕೂತಿರುವುದಿಲ್ಲ. ನನ್ನ ಕೆಲಸವನ್ನು ಚಕಚಕ ಎರಡೇ ಗಂಟೆಗಳಲ್ಲಿ ಮುಗಿಸಿಬಿಡುವೆ.’

‘ಎರಡೇ ಗಂಟೆ! ಅದು ಹೇಗೆ ಮುಗಿಸುವೆ? ನಮ್ಮ ದೇಶದಲ್ಲಿ ಎಲ್ಲ ಆಫೀಸರರೂ, ಉದಾಹರಣೆಗೆ ಮ್ಯಾಜಿಸ್ಟ್ರೇಟರೂ ಸಹಾ, ಏಳು ಗಂಟೆ ಕಾಲ ಕಚೇರಿ ಕೆಲಸ ಮಾಡಬೇಕು.’

‘ಅವರಲ್ಲಿ ಕೆಲವರು ಕೆಲಸ ಮಾಡುವುದು ನೋಡಿದ್ದೇನೆ. ಅವರು ಏಳುಗಂಟೆ ಕೆಲಸ ಮಾಡುತ್ತಾರೆ ಎಂದು ಅನಿಸಿದೆಯೆ ನಿನಗೆ?’

‘ಹೌದು, ಖಂಡಿತ ಮಾಡುತ್ತಾರೆ.’

‘ಇಲ್ಲ ಸುಲ್ತಾನಾ. ಅವರು ಮಾಡುವುದಿಲ್ಲ. ಚೊರೂಟು ಸೇದುತ್ತಾ ಸಮಯ ವ್ಯರ್ಥ ಮಾಡುತ್ತಾರೆ. ಕೆಲವರಂತೂ ಕಚೇರಿ ಸಮಯದಲ್ಲೇ ೨-೩ ಚೊರೂಟು ಎಳೆಯುತ್ತಾರೆ. ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚು ಮಾತಾಡುತ್ತಾರೆ, ಕಡಿಮೆ ಮಾಡುತ್ತಾರೆ. ಒಂದು ಚೊರೂಟು ಸೇದಲು ಅರ್ಧ ಗಂಟೆ ಬೇಕು. ಅವರು ದಿನಕ್ಕೆ ಹನ್ನೆರೆಡು ಚೊರೂಟು ಸೇದುವವರು ಅಂತಿಟ್ಟುಕೊ, ಎಷ್ಟಾಯಿತು? ನೋಡು, ಆರು ತಾಸು ಬರಿಯ ಸೇದುವುದಕ್ಕೆ ವ್ಯರ್ಥವಾಯಿತು.’

ಹೀಗೇ ನಾವು ಅನೇಕ ವಿಷಯಗಳ ಕುರಿತು ಮಾತಾಡಿದೆವು. ಅಲ್ಲಿ ಸಾಂಕ್ರಾಮಿಕ ಕಾಯಿಲೆಗಳಿರಲಿಲ್ಲ, ಸೊಳ್ಳೆಗಳು ಕಚ್ಚುವುದಿಲ್ಲ ಎಂದು ಗೊತ್ತಾಯಿತು. ಅಲ್ಲಿಲ್ಲಿ ಅಪಘಾತಗಳಲ್ಲಿ ಬಿಟ್ಟರೆ ಮಹಿಳಾರಾಜ್ಯದಲ್ಲಿ ಯಾರೂ ತಾರುಣ್ಯದಲ್ಲೇ ಅಕಾಲ ಮರಣಕ್ಕೀಡಾಗುವುದಿಲ್ಲ ಎಂದು ತಿಳಿದು ತುಂಬ ಆಶ್ಚರ್ಯವಾಯಿತು.

‘ನಮ್ಮ ಅಡಿಗೆಮನೆ ನೋಡುತ್ತೀಯೇನು?’ ಕೇಳಿದಳು.

‘ಖುಷಿಯಿಂದ’ ಎಂದೆ, ನೋಡಲು ಹೋದೆವು. ನಾನಲ್ಲಿಗೆ ಹೋದಾಗ ಗಂಡಸರು ಎಲ್ಲ ತೊಳೆದು ಸ್ವಚ್ಛಗೊಳಿಸುತ್ತಿದ್ದರು. ಒಂದು ಸುಂದರ ತರಕಾರಿ ತೋಟದಲ್ಲಿ ಅಡಿಗೆ ಮನೆಯಿತ್ತು. ಪ್ರತಿ ಬಳ್ಳಿ, ಪ್ರತಿ ಟೊಮ್ಯಾಟೊ ಗಿಡವೂ ತಮಗೆ ತಾವೇ ಆಭರಣದಂತಿದ್ದವು. ಹೊಗೆ, ಕರಿಮಸಿ ಯಾವುದೂ ಅಡಿಗೆ ಮನೆಯಲ್ಲಿ ಕಾಣಲಿಲ್ಲ. ಅದು ಶುಭ್ರವಾಗಿ, ಪ್ರಕಾಶಮಾನವಾಗಿ ಇತ್ತು. ಕಿಟಕಿಗಳು ಹೂಬಳ್ಳಿಗಳಿಂದ ಸುತ್ತುವರೆಯಲ್ಪಟ್ಟಿದ್ದವು. ಹೊಗೆ, ಬೆಂಕಿಯ ಯಾವ ಸುಳುಹೂ ಕಾಣಲಿಲ್ಲ.

‘ನೀವು ಅಡುಗೆ ಹೇಗೆ ಮಾಡುತ್ತೀರಿ?’ ಕೇಳಿದೆ.

‘ಸೂರ್ಯನ ಶಾಖದಿಂದ.’ ಎಂದಳು. ಅದೇವೇಳೆ ಸೂರ್ಯನ ಸಾಂದ್ರಗೊಳಿಸಲ್ಪಟ್ಟ ಶಾಖ ಹಾಯುವ ಪೈಪನ್ನು ತೋರಿಸಿದಳು. ತೋರಿಸುತ್ತ ಅಲ್ಲೇ ಸರಸರ ಏನನ್ನೋ ತಯಾರಿಸಿದಳು.

‘ಸೂರ್ಯನ ಶಾಖ ಒಗ್ಗೂಡಿಸಿ ಸಂಗ್ರಹಿಸಲು ಏನು ಮಾಡುತ್ತೀರಿ?’ ತುಂಬ ಆಶ್ಚರ್ಯದಿಂದ ಕೇಳಿದೆ.

‘ಹಾಗಾದರೆ ನಮ್ಮ ಪೂರ್ವೇತಿಹಾಸವನ್ನೂ ನಿನಗೆ ಸ್ವಲ್ಪ ಹೇಳಲೇಬೇಕು. ೩೦ ವರ್ಷ ಕೆಳಗೆ, ನಮ್ಮ ಇವತ್ತಿನ ರಾಣಿ ೧೩ ವರ್ಷದವಳಾದಾಗ ಸಿಂಹಾಸನಕ್ಕೆ ಅಧಿಪತಿಯಾದಳು. ಅವಳು ಹೆಸರಿಗಷ್ಟೆ ರಾಣಿ. ಪ್ರಧಾನಮಂತ್ರಿಯೇ ರಾಜ್ಯ ಆಳುತ್ತಿದ್ದ. ನಮ್ಮ ಒಳ್ಳೆಯ ರಾಣಿ ವಿಜ್ಞಾನವನ್ನು ಬಹು ಇಷ್ಟಪಡುತ್ತಿದ್ದಳು. ತನ್ನ ದೇಶದ ಎಲ್ಲ ಹೆಣ್ಮಕ್ಕಳೂ ಶಿಕ್ಷಣ ಕಲಿಯಬೇಕೆಂದು ಸುತ್ತೋಲೆ ಹೊರಡಿಸಿದಳು. ಹಲವು ಹುಡುಗಿಯರ ಶಾಲೆ ತೆರೆಯಲ್ಪಟ್ಟು, ಅವಳ ಸಹಾಯದಿಂದ ನಡೆಯತೊಡಗಿದವು. ಹೆಣ್ಮಕ್ಕಳಲ್ಲಿ ಶಿಕ್ಷಣ ಹಬ್ಬತೊಡಗಿತು. ಬಾಲ್ಯವಿವಾಹ ನಿಂತುಹೋಯಿತು. ೨೧ ವರ್ಷದ ಒಳಗೆ ಯಾವ ಹುಡುಗಿಯೂ ಮದುವೆಯಾಗುವಂತಿಲ್ಲ ಎಂಬ ಕಾನೂನು ಬಂತು. ನಿನಗೆ ಹೇಳಬೇಕೆಂದರೆ ಈ ಎಲ್ಲ ಬದಲಾವಣೆ ಬರುವ ಮುಂಚೆ ನಾವೂ ಕಟ್ಟುನಿಟ್ಟಾಗಿ ಪರ್ದಾ ಆಚರಿಸುತ್ತಿದ್ದೆವು.’

‘ಎಲ್ಲ ಹೇಗೆ ಬದಲಾಗಿಹೋಯಿತು?’ ನಗುತ್ತ ಪ್ರಶ್ನೆ ಕೇಳಿ ಅವಳನ್ನು ತಡೆದೆ.

‘ಬೇರ್ಪಡಿಸುವಿಕೆ ಹಾಗೇ ಇದೆ. ಕೆಲವೇ ವರ್ಷಗಳಲ್ಲಿ ಹುಡುಗಿಯರಿಗೆ ಪ್ರತ್ಯೇಕ ಯೂನಿವರ್ಸಿಟಿ ಶುರುವಾದವು. ಅಲ್ಲಿ ಗಂಡಸರನ್ನು ಸೇರಿಸಿಕೊಳ್ಳಲಿಲ್ಲ. ರಾಣಿ ವಾಸಿಸುವ ರಾಜಧಾನಿಯಲ್ಲಿ ಅಂಥ ಎರಡು ಯೂನಿವರ್ಸಿಟಿಗಳಿವೆ. ಒಂದು ಯೂನಿವರ್ಸಿಟಿ ಹಲವು ಪೈಪುಗಳ ಜೋಡಿಸಲ್ಪಟ್ಟ ವಿಶಿಷ್ಟ ಬಲೂನನ್ನು ಕಂಡುಹಿಡಿಯಿತು. ಅದು ಮೋಡದ ನಾಡಿಗಿಂತ ಮೇಲೆ ತೇಲುವಂತೆ ಮಾಡಿದರು. ಮೋಡಗಳಿಂದ ಬಲೂನು ನಮಗೆಷ್ಟು ನೀರು ಬೇಕೋ ಅಷ್ಟನ್ನು ಹೀರಿಕೊಂಡು ಸಂಗ್ರಹಿಸುತ್ತದೆ. ಹೆಚ್ಚೆಚ್ಚು ನೀರು ಬಳಸಿದಂತೆ ಹೆಚ್ಚೆಚ್ಚು ಮೋಡಗಳು ಖಾಲಿಯಾಗಿ ಯೂನಿವರ್ಸಿಟಿ ಪ್ರದೇಶದಲ್ಲಿ ಬಿರುಗಾಳಿ, ಮಳೆ ಬರುವುದನ್ನು ನಮ್ಮ ಲೇಡಿ ಪ್ರಿನ್ಸಿಪಾಲ್ ತಡೆಗಟ್ಟಿದರು.’

‘ಹೌದಾ! ಇಲ್ಲಿ ಕೆಸರೇ ಇಲ್ಲ ಏಕೆ ಎಂದು ಈಗ ನಂಗೆ ಅರ್ಥವಾಗ್ತ ಇದೆ’ ಎಂದೆ. ಆದರೆ ನೀರನ್ನು ಪೈಪುಗಳಲ್ಲಿ ಹಿಡಿದಿಡುವುದು ಹೇಗೆಂದು ನನಗೆ ತಿಳಿಯಲಿಲ್ಲ. ಅವಳು ನನಗೆ ಹಂತಹಂತವಾಗಿ ವಿವರಿಸಿದಳಾದರೂ ನನಗೆ ಅರ್ಥವಾಗಲಿಲ್ಲ, ಏಕೆಂದರೆ ವಿಜ್ಞಾನ ಕುರಿತ ನನ್ನ ತಿಳುವಳಿಕೆ ಏನೂ ಇಲ್ಲವೆನ್ನುವಷ್ಟು ಕಡಿಮೆ. ಅವಳು ಮುಂದುವರೆಸಿದಳು: 

‘ಬೇರೆ ಮಹಿಳಾ ಯೂನಿವರ್ಸಿಟಿಗಳಿಗೆ ಇದರಿಂದ ಹೊಟ್ಟೆಕಿಚ್ಚಾಯಿತು. ಅವರು ಪೈಪೋಟಿಯಿಂದ ನಮಗಿಂತ ಬೇರೇನಾದರೂ ವಿಶೇಷವಾದದ್ದು ಮಾಡಬೇಕೆಂದು ಪಣತೊಟ್ಟರು. ಕೊನೆಗೆ ಸೂರ್ಯನ ಶಾಖವನ್ನು ತಮಗೆಷ್ಟು ಬೇಕೋ ಅಷ್ಟು ಹಿಡಿದಿಡುವ ಯಂತ್ರವೊಂದನ್ನು ಕಂಡುಹಿಡಿದರು. ಹಾಗೆ ಸಂಗ್ರಹಿಸಿದ ಶಾಖವನ್ನು ಬೇಕಾದಾಗ, ಬೇಕಾದವರಿಗೆ ಕೊಟ್ಟು ಬಳಸುವ ವಿಧಾನ ಅಭಿವೃದ್ಧಿಪಡಿಸಿದರು. 

‘ಹೆಣ್ಣುಮಕ್ಕಳು ಹೀಗೆ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿದದಾಗ ಗಂಡಸರು ಸೈನ್ಯಶಕ್ತಿ ಹೆಚ್ಚಿಸುವ ಕೆಲಸದಲ್ಲಿ ಮಗ್ನರಾಗಿಹೋದರು. ಮಹಿಳಾ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಮೋಡದಿಂದ ನೀರನ್ನೂ, ಸೂರ್ಯನಿಂದ ಶಾಖವನ್ನೂ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿಸಿದ್ದಾರೆ ಎಂದು ಗೊತ್ತಾದಾಗ ಅವರ ನಕ್ಕು ಅತ್ತ ಸರಿಸಿಬಿಟ್ಟರು. ಇಡೀ ಪ್ರಯತ್ನವೇ ‘ಅತಿಭಾವುಕ ಕನಸು’ ಎಂದು ಕರೆದರು.’

‘ನಿಮ್ಮ ಸಾಧನೆಗಳು ನಿಜಕ್ಕೂ ಅದ್ಭುತವಾಗಿವೆ. ಆದರೆ ಗಂಡಸರನ್ನು ಜೆನಾನಾದಲ್ಲಿ ತುಂಬಲು ಹೇಗೆ ಸಾಧ್ಯವಾಯಿತು ಅಂತ ಹೇಳು. ಅವರನ್ನು ಮೊದಲು ಹಿಡಿದಿರಾ?’

‘ಇಲ್ಲ’

‘ಆದರೆ ಅವರು ತಮ್ಮ ಮುಕ್ತ ವಾತಾವರಣದ ಸ್ವಚ್ಛಂದ ಬದುಕನ್ನು ತಾವೇ ಬಿಟ್ಟುಕೊಟ್ಟು ಶರಣಾಗಿ ನಾಲ್ಕು ಗೋಡೆಗಳ ನಡುವಿನ ಜೆನಾನಾದಲ್ಲಿರಲು ಒಪ್ಪಿರುವುದು ಅಸಾಧ್ಯ. ಬಹುಶಃ ಅವರಿಗಿಂತ ಹೆಚ್ಚು ಬಲ ಪ್ರಯೋಗಿಸಿ ಈ ಕೆಲಸ ಮಾಡಿಕೊಂಡಿರಬೇಕು.’

‘ಹೌದು, ಅವರನ್ನು ಬಲವನ್ನು ಹಿಂದಿಕ್ಕಲಾಯಿತು.’

‘ಯಾರಿಂದ? ಸ್ತ್ರೀಯೋಧರಿಂದ ಇರಬೇಕಲ್ಲವೆ?’

‘ಇಲ್ಲ, ಶಸ್ತ್ರಾಸ್ತ್ರಗಳಿಂದಲ್ಲ.’

‘ಹೌದು, ಸಾಧ್ಯವಿರಲಾರದು. ಗಂಡಸರ ಶಸ್ತ್ರಾಸ್ತ್ರಗಳು ಹೆಂಗಸರದಕ್ಕಿಂತ ಬಲವಾದವು. ಹಾಗಾದರೆ ಏನು ಮಾಡಿದಿರಿ?’

‘ಬುದ್ಧಿಯಿಂದ’

‘ಆದರೆ ಅವರ ಮಿದುಳೂ ಹೆಂಗಸರದಕ್ಕಿಂತ ಭಾರ ಮತ್ತು ದೊಡ್ಡ ಇರುವಂಥದು, ಅಲ್ಲವೆ?’

‘ಹೌದು, ಆದರೇನು? ಆನೆಗೆ ಮನುಷ್ಯನದಕ್ಕಿಂದ ದೊಡ್ಡ, ಭಾರವಾದ ಮಿದುಳಿದೆ. ಆದರೆ ಮನುಷ್ಯ ಆನೆಯನ್ನು ಸರಪಳಿಯಿಂದ ಬಂಧಿಸಿ ತನಗಿಷ್ಟ ಬಂದ ಕೆಲಸ ಮಾಡಿಸುವುದಿಲ್ಲವೆ?’

‘ಸರಿಯಾಗಿ ಹೇಳಿದೆ, ಆದರೆ ದಯವಿಟ್ಟು ಹೇಳು, ಇದೆಲ್ಲ ಹೇಗೆ ಸಾಧ್ಯವಾಯಿತು? ನನಗೆ ಅದನ್ನು ತಿಳಿಯಲು ತಡೆಯಲಾರದ ಕುತೂಹಲ.’

‘ಹೆಣ್ಣುಮಕ್ಕಳ ಮಿದುಳು ಗಂಡಸರದಕ್ಕಿಂತ ಚುರುಕಾಗಿ ಓಡುತ್ತದೆ. ೧೦ ವರ್ಷ ಕೆಳಗೆ ಸೈನ್ಯಾಧಿಕಾರಿಗಳು ನಮ್ಮ ಆವಿಷ್ಕಾರಗಳನ್ನು ಅತಿಭಾವುಕ ಕನಸು ಎಂದು ಕರೆದಮೇಲೆ ಕೆಲವು ತರುಣಿಯರಿಗೆ ಅವರಿಗೆ ಸರಿಯಾಗಿ ತಿರುಗಿ ಹೇಳಬೇಕೆಂಬ ತುಡಿತ ಹುಟ್ಟಿತು. ಆದರೆ ಎರಡೂ ಯೂನಿವರ್ಸಿಟಿಯ ಮಹಿಳಾ ಪ್ರಿನ್ಸಿಪಾಲರು ಅವರಿಗೆ ಉತ್ತರವನ್ನು ಪದಗಳಿಂದ ಅಲ್ಲ, ಅವಕಾಶ ಸಿಕ್ಕಾಗ  ಕ್ರಿಯೆಯಿಂದ ತೋರಿಸಬೇಕು ಎಂದರು. ಅಂತಹ ಅವಕಾಶಕ್ಕೆ ಅವರು ಹೆಚ್ಚು ಕಾಯಬೇಕಾಗಲಿಲ್ಲ.’

‘ಎಂಥ ಆಶ್ಚರ್ಯ?’ ನಾನು ಮನದುಂಬಿ ಚಪ್ಪಾಳೆ ತಟ್ಟಿದೆ. ‘ಈಗ ಹೆಮ್ಮೆಯ ಗಣ್ಯರು ಭಾವುಕ ಕನಸುಗಳನ್ನು ತಾವೇ ಕಾಣುತ್ತಿದ್ದಾರೆ.’

‘ಕೇಳು ಸುಲ್ತಾನಾ, ಪಕ್ಕದ ದೇಶದಿಂದ ಕೆಲವು ಜನ ನಮ್ಮ ದೇಶಕ್ಕೆ ಬಂದು ಆಶ್ರಯ ಪಡೆದರು. ಅವರು ಎಂಥದೋ ರಾಜಕೀಯ ಅಪರಾಧದ ಕಾರಣವಾಗಿ ತೊಂದರೆಯಲ್ಲಿ ಸಿಲುಕಿದ್ದರು. ಒಳ್ಳೆಯ ಆಡಳಿತಕ್ಕಿಂತ ಅಧಿಕಾರಕ್ಕೇ ಹಂಬಲಿಸುತ್ತಿದ್ದ ಅಲ್ಲಿನ ರಾಜ ದಯಾಳುವಾದ ನಮ್ಮ ರಾಣಿಯ ಬಳಿ ಅವರನ್ನು ವಾಪಸು ಕೊಡಲು ಹೇಳಿದ. ಆದರೆ ರಾಣಿ ಆಶ್ರಯ ಕೇಳಿ ಬಂದ ನಿರಾಶ್ರಿತರಿಗೆ ಸಹಾಯ ನಿರಾಕರಿಸುವುದು ತನ್ನ ತತ್ವಕ್ಕೆ ವಿರುದ್ಧವೆಂದು ನಿರಾಕರಿಸಿದಳು. ಅದಕ್ಕೆ ಸಿಟ್ಟಾದ ಆ ದೇಶದ ರಾಜ ನಮ್ಮ ಮೇಲೆ ಯುದ್ಧ ಸಾರಿದ. ನಮ್ಮ ಸೈನ್ಯಾಧಿಕಾರಿಗಳು ತುದಿಗಾಲಲ್ಲಿ ಸಿದ್ಧರಾಗಿ ಯುದ್ಧಭೂಮಿಯಲ್ಲಿ ಶತ್ರುವನ್ನು ಎದುರುಗೊಳ್ಳಲು ಹೋದರು. ಆದರೆ ಶತ್ರು ತುಂಬ ಬಲಶಾಲಿಯಾಗಿದ್ದ. ನಮ್ಮ ಸೈನಿಕರು ವೀರಾವೇಶದಿಂದ ಕಾದಾಡಿದದೇನೋ ನಿಜ, ಆದರೆ ಅವರ ಪ್ರಯತ್ನಗಳ ಹೊರತಾಗಿ ವಿದೇಶೀ ಸೈನ್ಯ ನಮ್ಮ ಪ್ರಾಂತ್ಯವನ್ನು ಆಕ್ರಮಿಸುತ್ತಾ ಒಂದೊಂದೇ ಹೆಜ್ಜೆ ಮುಂದೆ ಬಂತು.

ಹೆಚ್ಚುಕಮ್ಮಿ ಎಲ್ಲ ಗಂಡಸರೂ ಯುದ್ಧಕ್ಕೆ ಹೋದರು. ೧೬ ವರ್ಷದ ಹುಡುಗರವರೆಗೆ ಎಲ್ಲ ಗಂಡಸರೂ ಯುದ್ಧಕ್ಕೆ ಹೋದರು. ಬಹಳಷ್ಟು ಸೈನಿಕರನ್ನು ಕೊಲ್ಲಲಾಯಿತು. ಕೆಲವರನ್ನು ಓಡಿಸಲಾಯಿತು. ಶತ್ರುಸೈನಿಕರು ರಾಜಧಾನಿಯಿಂದ ೨೫ ಮೈಲು ಪ್ರದೇಶ ದೂರದವರೆಗೆ ಬಂದೇ ಬಿಟ್ಟರು. 

ಜ್ಞಾನಿ, ಹಿರಿಯ ಮಹಿಳೆಯರೆಲ್ಲ ರಾಣಿಯ ಅರಮನೆಯಲ್ಲಿ ಸೇರಿ ನಮ್ಮ ನೆಲವನ್ನು ಉಳಿಸಿಕೊಳ್ಳಲು ಮುಂದೇನು ಮಾಡುವುದೆಂಬ ಬಗ್ಗೆ ಸಭೆ ನಡೆಸಿ ಚರ್ಚೆ ನಡೆಸಿದರು. ಕೆಲವರು ನಾವೂ ಯೋಧರಂತೆ ಯುದ್ಧ ಮಾಡಬೇಕೆಂದರು. ಮತ್ತೆ ಕೆಲವರು ತಕರಾರೆತ್ತಿ ಹೆಂಗಸರು ಕತ್ತಿ, ಕೋವಿಗಳೊಂದಿಗೆ ಯುದ್ಧ ಮಾಡುವ ತರಬೇತಿ ಪಡೆದವರಲ್ಲ; ಮತ್ತಿನ್ಯಾವುದೇ ಶಸ್ತ್ರಾಸ್ತ್ರದೊಂದಿಗೆ ಹೋರಾಡಿ ಅಭ್ಯಾಸವಿಲ್ಲ ಎಂದರು. ಉಳಿದವರು ತಮ್ಮ ದೇಹ ದುರ್ಬಲವಾಗಿದೆ ಎಂದು ಖೇದಗೊಂಡರು.

‘ದೇಹಬಲದಿಂದ ದೇಶ ಉಳಿಸಲಾರಿರಾದರೆ ಬುದ್ಧಿಬಲದಿಂದ ಉಳಿಸಿ’ ಎಂದಳು ರಾಣಿ. ಕೆಲ ಸಮಯ ಸ್ಮಶಾನ ಮೌನ. ಕೊನೆಗೆ ಮಹಾರಾಣಿ ಹೇಳಿದಳು: ‘ನನ್ನ ನೆಲ ಮತ್ತು ಮರ್ಯಾದೆ ಎರಡೂ ಕಳೆದು ಹೋಗುವುದಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಉಳಿದ ದಾರಿ.’ ಆಗ ಅದುವರೆಗು ಮಾತನಾಡದೆ ಯೋಚಿಸುತ್ತ ಕುಳಿತಿದ್ದ ಸೂರ್ಯನ ಶಾಖ ಸಂಗ್ರಹಿಸಿರುವ ಎರಡನೆ ಯೂನಿವರ್ಸಿಟಿಯ ಮಹಿಳಾ ಪ್ರಿನ್ಸಿಪಾಲ್ ಎದ್ದು ನಿಂತು, ‘ನಾವು ಹೆಚ್ಚುಕಮ್ಮಿ ಎಲ್ಲ ಕಳೆದುಕೊಂಡಿದ್ದೇವೆ, ನಮಗೆ ತುಂಬ ಕಡಿಮೆ ಭರವಸೆ ಉಳಿದಿದೆ. ಆದರೂ ಒಂದು ಮಾರ್ಗವಿದೆ, ಬೇಕಾದರೆ ಪ್ರಯತ್ನಿಸಬಹುದು, ನನಗೆ ತಿಳಿದಂತೆ ಅದು ಏಕೈಕ ಮತ್ತು ಕೊನೆಯ ದಾರಿ’ ಎಂದು ಹೇಳಿದಳು. ಅದರಲ್ಲಿ ಸೋತರೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದಳು. ಅಲ್ಲಿ ಸೇರಿದ ಎಲ್ಲರೂ ಸಾವು ಬೇಕಾದರೂ ಬರಲಿ, ಅಡಿಯಾಳಾಗಿ ಮಾತ್ರ ಬದುಕಲಾರೆವು ಎಂದು ಪ್ರತಿಜ್ಞೆಗೈದರು.

ರಾಣಿ ಎಲ್ಲರಿಗೂ ವಂದಿಸಿ ಮಹಿಳಾ ಪ್ರಿನ್ಸಿಪಾಲರಿಗೆ ಅವರ ಪ್ರಯತ್ನ ನಡೆಸಲು ಹೇಳಿದರು. ಆಗ ಆಕೆ ಎದ್ದುನಿಂತು, ‘ನಾವು ಹೊರಗೆ ಹೋಗುವ ಮೊದಲು ನಮ್ಮ ಗಂಡಸರು ಜೆನಾನಾದೊಳಗೆ ಬರಬೇಕು. ಪರ್ದಾ ಆಚರಣೆಯ ಸಲುವಾಗಿ ನಾನು ಈ ಬೇಡಿಕೆ ಇಡುತ್ತಿದ್ದೇನೆ.’ ರಾಣಿ ಅದು ಹೌದು ಎಂದು ಒಪ್ಪಿದಳು.

‘ಮರುದಿನ ರಾಣಿ ಎಲ್ಲ ಗಂಡಸರನ್ನು ಕರೆದು ಗೌರವ ಮತ್ತು ಸ್ವಾತಂತ್ರ್ಯದ ಉಳಿವಿನ ಸಲುವಾಗಿ ಎಲ್ಲರೂ ಜೆನಾನಾಗೆ ತೆರಳಬೇಕೆಂದು ಕೇಳಿಕೊಂಡಳು. ಗಾಯಗೊಂಡು ದಣಿದ ಅವರು ಈ ಆಜ್ಞೆಯನ್ನು ವರವೆಂದು ಸ್ವೀಕರಿಸಿದರು. ವಿರೋಧದ ಒಂದು ಮಾತೂ ಹೇಳದೆ ತಲೆಬಾಗಿಸಿ ಎಲ್ಲರೂ ಜೆನಾನಾದೊಳಗೆ ಹೋದರು. ಈ ದೇಶಕ್ಕೆ ಯಾವುದೇ ಭರವಸೆ ಇಲ್ಲವೆಂಬ ಬಗ್ಗೆ ಅವರಿಗೆ ಖಚಿತವಿತ್ತು. ಆಗ ಮಹಿಳಾ ಪ್ರಿನ್ಸಿಪಾಲ್ ತನ್ನ ಎರಡು ಸಾವಿರ ವಿದ್ಯಾರ್ಥಿಗಳೊಂದಿಗೆ ರಣರಂಗಕ್ಕೆ ಹೋದರು. ಶೇಖರಿಸಿಟ್ಟ ಸೂರ್ಯನ ಎಲ್ಲ ಶಾಖ ಮತ್ತು ಕಿರಣಗಳನ್ನು ಶತ್ರುಗಳ ಮೇಲೆ ಹರಿಯಬಿಟ್ಟರು. ಆ ಬೆಳಕು ಮತ್ತು ಶಾಖ ಮನುಷ್ಯರು ತಡೆಯಲಾರದಷ್ಟು ಇತ್ತು. ಕಂಗಾಲಾಗಿ ಅವರೆಲ್ಲ ಓಡತೊಡಗಿದರು. ಆ ಗಲಿಬಿಲಿಯಲ್ಲಿ ಅದನ್ನು ಎದುರಿಸುವುದು ಹೇಗೆಂದೇ ಅವರಿಗೆ ತಿಳಿಯಲಿಲ್ಲ. ತಮ್ಮ ಬಂದೂಕು ಮತ್ತಿತರ ಶಸ್ತ್ರಾಸ್ತ್ರಗಳನ್ನು ಅವರು ಅಲ್ಲಲ್ಲೇ ಬಿಟ್ಟು ಹೋದಾಗ ಅವನ್ನೂ ಸೂರ್ಯನ ಶಾಖದಿಂದ ಸುಟ್ಟು ನಾಶಗೊಳಿಸಲಾಯಿತು. ಆಗಿನಿಂದ ನಮ್ಮ ದೇಶವನ್ನು ಆಕ್ರಮಿಸಲು ಯಾರೂ ಪ್ರಯತ್ನಿಸಿಲ್ಲ.’

‘ಆಗಿನಿಂದ ನಿಮ್ಮ ಗಂಡಸರು ಜೆನಾನಾದಿಂದ ಹೊರಬರಲು ಪ್ರಯತ್ನಿಸಲೇ ಇಲ್ಲವೆ?’

‘ಹೌದು, ಅವರಿಗೆ ಸ್ವತಂತ್ರವಾಗಬೇಕೆನಿಸಿತು. ಕೆಲವು ಪೊಲೀಸ್ ಕಮಿಷನರುಗಳು ಮತ್ತು ಜಿಲ್ಲಾ ನ್ಯಾಯಾಧೀಶರು ಯುದ್ಧ ವೈಫಲ್ಯಕ್ಕೆ ಮಿಲಿಟರಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಜೈಲಿಗಟ್ಟಲು ಅರ್ಹರಾದರೂ ಅವರು ನಿರ್ಲಕ್ಷ್ಯ ತೋರದೆ ಕಾದಾಡಿರುವುದರಿಂದ ಶಿಕ್ಷಿಸಬಾರದು ಹಾಗೂ ಎಲ್ಲರನ್ನು ಮತ್ತೆ ಅವರವರ ಅಧಿಕಾರದಲ್ಲಿ ಮುಂದುವರೆಸಬೇಕು ಎಂದು ಕೋರಿ ರಾಣಿಗೆ ಪತ್ರ ಕಳಿಸಿದರು. ಆಗ ರಾಣಿಯು ಸುತ್ತೋಲೆಯೊಂದನ್ನು ಕಳಿಸಿ ಅವರ ಸೇವೆ ಅವಶ್ಯವಿರುವಾಗ ಕರೆಸಿಕೊಳ್ಳಲಾಗುವುದೆಂದೂ, ಅಲ್ಲಿಯವರೆಗೆ ಎಲ್ಲರೂ ಅವರವರ ಜಾಗಗಳಲ್ಲಿರಬೇಕೆಂದೂ ತಿಳಿಸಿದಳು. ಅವರಿಗೀಗ ಪರ್ದಾ ಪದ್ಧತಿ ರೂಢಿಯಾಗಿ ಗೊಣಗುಡುವುದು ನಿಲಿಸಿ ಅಲ್ಲಿಗೇ ಹೊಂದಿಕೊಂಡಿರುವುದರಿಂದ ನಾವು ಅವರನ್ನು ಮರ್ದಾನಾ ಎನ್ನುವುದಿಲ್ಲ, ಜೆನಾನಾ ಎನ್ನುತ್ತೇವೆ.’

‘ಆದರೆ ಕಳ್ಳತನ, ಕೊಲೆ ಪ್ರಕರಣಗಳಲ್ಲಿ ಪೊಲೀಸರು ಅಥವಾ ಮ್ಯಾಜಿಸ್ಟ್ರೇಟರಿಲ್ಲದೆ ಹೇಗೆ ನಿಭಾಯಿಸುವಿರಿ?’

‘ಮರ್ದಾನಾ ಪದ್ಧತಿ ಇರುವುದರಿಂದ ಅಪರಾಧ ಅಥವಾ ತಪ್ಪಿತಸ್ಥರ ಪ್ರಕರಣಗಳೇ ಇಲ್ಲ. ಆದ್ದರಿಂದ ಅಪರಾಧಿಯನ್ನು ಕಂಡುಹಿಡಿಯಲು ನಮಗೆ ಪೊಲೀಸರೇ ಬೇಡ. ಅಥವಾ ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ನಡೆಸಲು ಮ್ಯಾಜಿಸ್ಟ್ರೇಟರೇ ಬೇಡ.’

‘ಅದು ನಿಜವಾಗಿ ತುಂಬ ಒಳ್ಳೆಯದು. ಅಕಸ್ಮಾತ್ ಯಾರಾದರೂ ಅಪ್ರಾಮಾಣಿಕ ವ್ಯಕ್ತಿಯಿದ್ದರೂ ಅವರನ್ನು ಸುಲಭವಾಗಿ ಸರಿ ಮಾಡಬಹುದು. ಒಂದು ಹನಿ ರಕ್ತ ಸುರಿಸದೆ ನಿರ್ಧಾರಕ ಗೆಲುವನ್ನು ನಿಮಗೆ ತಂದುಕೊಡಲು ಸಾಧ್ಯವಾದರೆ, ಕಷ್ಟವಿಲ್ಲದೆ ಅಪರಾಧವನ್ನೂ ಅಪರಾಧಿಗಳನ್ನೂ ತಡೆಯಬಹುದು.’

‘ಈಗ ಸುಲ್ತಾನಾ, ನೀನು ಇಲ್ಲೆ ಕೂತಿರುವೆಯೋ ಅಥವಾ ನನ್ನ ಜೊತೆ ಹಜಾರಕ್ಕೆ ಬರುತ್ತೀಯೋ?’ ಸಾರಾ ಕೇಳಿದಳು.

‘ನಿನ್ನ ಅಡುಗೆಮನೆ ಅಂತಃಪುರದ ಭೋಜನಾಲಯಕ್ಕಿಂತ ಕಡಿಮೆಯಿಲ್ಲ’ ನಗುತ್ತ ಹೇಳಿದೆ. ‘ಆದರೆ ನಾವೀಗ ಈ ಜಾಗ ಬಿಡಲೇಬೇಕು. ಗಂಡಸರು ಅಡಿಗೆಮನೆಯ ಕೆಲಸದಿಂದ ಇಷ್ಟು ಹೊತ್ತು ಅವರನ್ನು ದೂರವಿಟ್ಟಿದ್ದಕ್ಕೆ ನಮ್ಮನ್ನು ಶಪಿಸುತ್ತಿರಬಹುದು.’ ನಾವಿಬ್ಬರೂ ಮನಸಾರೆ ನಕ್ಕೆವು.

‘ನಾನು ಮನೆಗೆ ವಾಪಸು ಹೋದ ನಂತರ ನನ್ನ ಗೆಳತಿಯರಿಗೆ ದೂರದ ಮಹಿಳಾ ರಾಜ್ಯದ ಬಗ್ಗೆ, ಅಲ್ಲಿ ಹೆಂಗಸರೇ ರಾಜ್ಯವಾಳುತ್ತ ಎಲ್ಲವನ್ನೂ ನಿಯಂತ್ರಿಸುತ್ತಿರುವ ಬಗ್ಗೆ, ಮರ್ದಾನದಲ್ಲಿ ಗಂಡಸರನ್ನಿಟ್ಟು ಅಡಿಗೆ, ಮನೆಕೆಲಸ, ಮಕ್ಕಳನ್ನು ನೋಡಿಕೊಳ್ಳುವಂತೆ ಮಾಡಿರುವ ಬಗ್ಗೆ, ಅಡಿಗೆಯನ್ನು ಅದು ಸಂತೋಷಕೊಡುವಷ್ಟು ಸರಳಗೊಳಿಸಿರುವ ಬಗ್ಗೆ ಏನಾದರೂ ಹೇಳಿದರೆ ಎಲ್ಲ ತುಂಬ ಆಶ್ಚರ್ಯಪಡುತ್ತಾರೆ.’

‘ಹೌದು, ನೀನಿಲ್ಲಿ ನೋಡಿದ ಎಲ್ಲದರ ಬಗೆಗೆ ಅವರಿಗೆ ಹೇಳು.’

‘ದಯವಿಟ್ಟು ನನಗೆ ಉಳುಮೆಯನ್ನು ಹೇಗೆ ಮಾಡುತ್ತೀರಿ? ಕೃಷಿ ಮತ್ತಿತರ ಕಠಿಣ ದುಡಿಮೆಯ ಕೆಲಸ ಹೇಗೆ ಮಾಡುತ್ತೀರಿ ಅಂತ ಹೇಳು.’

‘ನಮ್ಮ ಹೊಲಗಳನ್ನು ವಿದ್ಯುತ್ತಿನ ಸಹಾಯದಿಂದ ಉಳುತ್ತೇವೆ. ಉಳಿದ ಕಠಿಣ ಕೆಲಸಗಳಿಗೂ ಅದೇ ಶಕ್ತಿ ಒದಗಿಸುತ್ತದೆ. ಅದನ್ನೇ ವಾಯುಯಾನದ ಓಡಾಟಕ್ಕೂ ಕೂಡಾ ಬಳಸುತ್ತೇವೆ. ನಮಗೆ ಯಾವುದೇ ರೈಲು ರಸ್ತೆಯಿಲ್ಲ, ಅಥವಾ ಟಾರು ಹಾಕಿದ ರಸ್ತೆಗಳಿಲ್ಲ.’

‘ಓ, ಅದಕ್ಕೇ ರಸ್ತೆ, ರೈಲು ಅಪಘಾತ ಸಂಭವಿಸುವುದೇ ಇಲ್ಲ ಇಲ್ಲಿ. ನಿಮಗೆ ಯಾವಾಗಲಾದರೂ ಮಳೆನೀರಿನ ಕೊರತೆ ಬಂದಿದೆಯೆ?’

‘ನೀರಿನ ಬಲೂನನ್ನು ಸ್ಥಾಪಿಸಿದ ಮೇಲೆ ಹಾಗಾಗಿಲ್ಲ. ನೀನು ದೊಡ್ಡ ಬಲೂನುಗಳು ಮತ್ತು ಅವಕ್ಕೆ ಅಂಟಿಸಿದ ಪೈಪುಗಳನ್ನು ನೋಡಿರಬಹುದು. ಅವುಗಳ ಸಹಾಯದಿಂದ ನಾವು ಎಷ್ಟು ಬೇಕೋ ಅಷ್ಟು ಮಳೆನೀರನ್ನು ಪಡೆಯಬಹುದು. ಅದರಿಂದ ನಮಗೆ ಪ್ರವಾಹ ಮತ್ತು ಗುಡುಗು ಸಿಡಿಲಿನ ಭಯವಿಲ್ಲ. ಪ್ರಕೃತಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಫಸಲು ಕೊಡುವಂತೆ ಮಾಡಲು ನಾವೆಲ್ಲ ನಿರತರಾಗಿರುತ್ತೇವೆ. ನಾವು ಸುಮ್ಮನೆ ಕೂರುವುದೇ ಇಲ್ಲವಾದ್ದರಿಂದ ನಮ್ಮ ನಡುವೆ ಜಗಳಗಳೇ ಇಲ್ಲ. ನಮ್ಮ ರಾಣಿಗೆ ಸಸ್ಯಶಾಸ್ತ್ರ ಎಂದರೆ ಬಲುಪ್ರೀತಿ; ಇಡೀ ದೇಶವನ್ನೇ ಒಂದು ಉದ್ಯಾನವನವನ್ನಾಗಿ ಮಾಡುವ ಮಹದಾಸೆ ಅವಳದು.’

‘ಅತ್ಯುತ್ತಮ ಯೋಚನೆ. ನಿಮ್ಮ ಮುಖ್ಯ ಆಹಾರ ಯಾವುದು?’

‘ಹಣ್ಣು’

‘ಬೇಸಿಗೆಯಲ್ಲಿ ನಿಮ್ಮ ದೇಶವನ್ನು ಹೇಗೆ ತಂಪಾಗಿಡುತ್ತೀರಿ? ನಾವು ನಮ್ಮ ದೇಶದಲ್ಲಿ ಮಳೆಯನ್ನು ದೇವಲೋಕದ ವರವೆಂದೇ ಭಾವಿಸುತ್ತೇವೆ.’

‘ತಡೆಯಲಾರದಷ್ಟು ಸೆಖೆಯಾದಾಗ ಕಾರಂಜಿಗಳ ನೀರನ್ನು ಸಿಂಪಡಿಸುತ್ತೇವೆ. ಚಳಿಗಾಲದಲ್ಲಿ ಸೂರ್ಯನ ಶಾಖದಿಂದ ನಮ್ಮ ಕೋಣೆಗಳನ್ನು ಬೆಚ್ಚಗಿಡುತ್ತೇವೆ.’

ಅವಳು ಸ್ನಾನದಮನೆ ತೋರಿಸಿದಳು. ಅದರ ಛಾವಣಿ ತೆಗೆಯಬಲ್ಲಂಥದು. ಅವಳಿಗೆ ಬೇಕಾದಾಗ ಶವರ್ ಸ್ನಾನ ಮಾಡಲು ಡಬ್ಬಿಯ ಮುಚ್ಚಳ ತೆಗೆದಂತೆ ಸ್ನಾನದಮನೆಯ ಛಾವಣಿ ತೆಗೆದು ಶವರಿನ ನಲ್ಲಿ ತಿರುಗಿಸಿದರಾಯಿತು. 

‘ನೀವು ಅದೃಷ್ಟವಂತರು’ ಹೇಳಿದೆ, ‘ನಿಮಗೆ ಬೇಕೆನ್ನುವುದೇ ಏನೂ ಉಳಿದಿಲ್ಲ. ಅಂದಹಾಗೆ ನಿಮ್ಮ ಧರ್ಮ ಯಾವುದು?’

‘ನಮ್ಮ ಧರ್ಮ ಪ್ರೀತಿ ಮತ್ತು ಸತ್ಯದ ಮೇಲೆ ನಿಂತಿರುವಂಥದು. ಒಬ್ಬರನ್ನೊಬ್ಬರು ಪ್ರೀತಿಸುವುದು ಮತ್ತು ಸಂಪೂರ್ಣ ಸತ್ಯವಾಗಿರುವುದು ನಮ್ಮ ಧಾರ್ಮಿಕ ಕರ್ತವ್ಯ. ಯಾರೇ ಆಗಲಿ, ಅವನು ಅವಳು, ಸುಳ್ಳು ಹೇಳಿದರೆ..’

‘ಮರಣದಂಡನೆ ಶಿಕ್ಷೆ?’

‘ಇಲ್ಲ, ಮರಣದಂಡನೆ ಶಿಕ್ಷೆಯಲ್ಲ. ನಾವು ದೇವರ ಸೃಷ್ಟಿಯನ್ನು ಕೊಲ್ಲುವುದರಲ್ಲಿ ಸಂತೋಷ ಕಾಣುವವರಲ್ಲ. ಸುಳ್ಳು ಹೇಳುವವರಿಗೆ ಮತ್ತಿನ್ಯಾವತ್ತೂ ವಾಪಸು ಬರದಂತೆ ಈ ನೆಲ ಬಿಟ್ಟು ಹೋಗು ಎನ್ನುತ್ತೇವೆ.’

‘ಎಂದರೆ ಅಪರಾಧಿಗೆ ಕ್ಷಮೆಯೇ ಇಲ್ಲವೇ?’

‘ಇದೆ, ಅವರು ಪ್ರಾಮಾಣಿಕವಾಗಿ ಪ್ರಾಯಶ್ಚಿತ್ತ ಮಾಡಿಕೊಂಡರೆ.’

‘ನಿಮ್ಮ ಸಂಬಂಧಿಗಳನ್ನು ಬಿಟ್ಟರೆ ಬೇರೆ ಗಂಡಸರನ್ನು ನೀವು ನೋಡುವುದೇ ಇಲ್ಲವೆ?’

‘ಪವಿತ್ರ ಸಂಬಂಧಗಳನ್ನು ಬಿಟ್ಟು ಬೇರಾರನ್ನೂ ನೋಡುವುದಿಲ್ಲ.’

‘ನಮ್ಮಲ್ಲಿ ಪವಿತ್ರ ಸಂಬಂಧದ ವಿಸ್ತಾರ ಸಣ್ಣದು. ಕಸಿನ್ನುಗಳು ಕೂಡಾ ಪವಿತ್ರವಲ್ಲ.’

‘ಆದರೆ ನಮ್ಮದು ತುಂಬ ವಿಸ್ತೃತ ವರ್ತುಲ. ದೂರದ ಸಂಬಂಧಿಗಳೂ ಸೋದರರಷ್ಟೇ ಪವಿತ್ರರು.’

‘ಅದು ತುಂಬ ಒಳ್ಳೆಯದು. ನಿಮ್ಮ ರಾಜ್ಯದಲ್ಲಿ ಬರೀ ಶುದ್ಧತೆಯೇ ತುಂಬಿಕೊಂಡಿದೆ. ನನಗೆ ನಿಮ್ಮ ರಾಣಿಯನ್ನು ನೋಡಬೇಕೆನಿಸುತ್ತಿದೆ. ಅವಳೇ ತಾನೇ ತನ್ನ ದೂರದೃಷ್ಟಿ ಮತ್ತು ಚಾತುರ್ಯದಿಂದ ಇದನ್ನೆಲ್ಲ ಆಗಮಾಡಿದ್ದು.’

‘ಆಯಿತು’ ಎಂದಳು ಸಾರಾ.

ಒಂದು ಚಚ್ಚೌಕ ಮರದ ತುಂಡಿಗೆ ಸ್ಕ್ರೂವಿನಿಂದ ಎರಡು ಸೀಟು ಕೂರಿಸಿದಳು. ಅದಕ್ಕೆ ಎರಡು ನಯಸಾದ, ಪಾಲಿಶ್ ಆದ ಬಾಲುಗಳ ಕೂಡಿಸಿದಳು. ಅದೇನೆಂದು ಕೇಳಿದಾಗ ಅದು ಹೈಡ್ರೋಜನ್ ಬಾಲ್ ಎಂದೂ, ಗುರುತ್ವಾಕರ್ಷಣೆ ಮೀರಿ ಹೋಗಲು ಅದು ಸಹಾಯ ಮಾಡುವುದೆಂದೂ ಅವಳು ಹೇಳಿದಳು. ಬೇರೆಬೇರೆ ಭಾರ ಹೊತ್ತೊಯ್ಯಲು ಬೇರೆಬೇರೆ ಗಾತ್ರದ ಬಾಲ್‌ಗಳನ್ನು ಬಳಸುವುದಾಗಿ ಹೇಳಿದಳು. ನಂತರ ಆ ಏರ್ ಕಾರಿಗೆ ಎರಡು ರೆಕ್ಕೆಗಳ ತರಹದ ರಚನೆಗಳ ಅಂಟಿಸಿದಳು. ಅವು ವಿದ್ಯುತ್ತಿನ ಸಹಾಯದಿಂದ ನಡೆಯುತ್ತವೆ ಎನ್ನುತ್ತ ನಾವು ಸರಿಯಾಗಿ ಕೂತ ನಂತರ ಒಂದು ಬಟನನ್ನು ಒತ್ತಿದಳು. ಆ ರೆಕ್ಕೆಗಳು ತಿರುಗತೊಡಗಿದವು. ನಾವು ವೇಗವೇಗವಾಗಿ ಚಲಿಸತೊಡಗಿದೆವು. ನಾವು ಆರೇಳು ಅಡಿ ಮೇಲೇರಿದೊಡನೆ ಸೀದಾ ಹೋಗತೊಡಗಿದೆವು. ನಮ್ಮ ಚಲನೆ ನನ್ನ ಅನುಭವಕ್ಕೆ ಬರುವ ಹೊತ್ತಿಗೆ ರಾಣಿಯ ಉದ್ಯಾನ ಕಣ್ಣಿಗೆ ಬಿತ್ತು. 

ನನ್ನ ಗೆಳತಿ ಮೊದಲು ಮಾಡಿದ್ದನ್ನೆಲ್ಲ ಮತ್ತೆ ತಿರುವುಮುರುವಾಗಿ ಮಾಡಿ ವಾಹನ ಕೆಳಗಿಳಿಸಿದಳು. ನೆಲಕ್ಕೆ ತಾಗಿದ ಕೂಡಲೇ ಅದು ನಿಂತಿತು. 

ನಾನು ಹಾರಿ ಬರುವಾಗ ರಾಣಿ ತನ್ನ ನಾಲ್ಕು ವರ್ಷದ ಮಗಳೊಡನೆ, ಅವಳನ್ನು ನೋಡಿಕೊಳ್ಳುವ ಮಹಿಳೆಯೊಡನೆ ನಡೆದು ಬರುತ್ತ ಇದ್ದಳು. 

‘ಹಲ್ಲೊ, ನೀನಿಲ್ಲಿ?’ ರಾಣಿ ಸಾರಾಳನ್ನು ನೋಡಿ ಕೂಗಿದಳು. ನನ್ನನ್ನು ರಾಣಿಗೆ ಪರಿಚಯಿಸಲಾಯಿತು, ಅವಳು ನನ್ನನ್ನು ಆದರದಿಂದ ಬರಮಾಡಿಕೊಂಡಳು.

ನನಗೆ ಅವಳೊಡನೆ ಗೆಳೆತನ ಮಾಡಲು ತುಂಬ ಖುಷಿಯಾಯಿತು. ಮಾತಾಡುತ್ತ ಆಡುತ್ತ ರಾಣಿ ತನ್ನ ರಾಜ್ಯದವರು ಬೇರೆಯವರೊಡನೆ ವ್ಯಾಪಾರ ನಡೆಸಲು ತನ್ನದೇನೂ ಅಭ್ಯಂತರವಿಲ್ಲ ಎಂದಳು. ‘ಆದರೆ, ಎಲ್ಲಿ ಹೆಂಗಸರನ್ನು ಜೆನಾನಾದಲ್ಲಿಟ್ಟಿದ್ದಾರೋ ಆ ದೇಶಗಳ ಜೊತೆಗೆ ಯಾವ ವ್ಯವಹಾರವೂ ಸಾಧ್ಯವಾಗುವುದಿಲ್ಲ. ನಾವು ಬೇರೆಯವರ ನೆಲ ಆಕ್ರಮಿಸಲಾರೆವು; ಕೊಹಿನೂರ್ ವಜ್ರಕ್ಕಿಂತ ಸಾವಿರ ಪಟ್ಟು ಹೊಳೆಯುವ ವಜ್ರವಿದ್ದರೂ ಅದಕ್ಕಾಗಿ ಹೋರಾಡಲಾರೆವು. ಅಥವಾ ಮಯೂರ ಸಿಂಹಾಸನದಿಂದ ಯಾವ ಆಡಳಿತಗಾರನನ್ನೂ ಕೆಳದೂಡಲಾರೆವು. ನಾವು ಜ್ಞಾನದ ಆಳ ಸಮುದ್ರಕ್ಕೆ ಜಿಗಿಯುತ್ತೇವೆ. ಪ್ರಕೃತಿಯು ನಮಗಾಗೇ ಅಲ್ಲಿಟ್ಟಿರುವ ರತ್ನಗಳಿಗಾಗಿ ಹುಡುಕುತ್ತೇವೆ. ನಿಸರ್ಗದತ್ತ ಕಾಣಿಕೆಗಳನ್ನು ಎಷ್ಟು ಸಾಧ್ಯವೋ ಅಷ್ಟು ಸಂತಸದಿಂದ ಅನುಭವಿಸುತ್ತೇವೆ’ ಎಂದಳು. 

ರಾಣಿಯಿಂದ ಬೀಳ್ಕೊಂಡ ಮೇಲೆ ನಾವು ಪ್ರಸಿದ್ಧ ಯೂನಿವರ್ಸಿಟಿಗಳನ್ನು ನೋಡಹೋದೆವು. ಅವರ ಕೆಲವು ಉತ್ಪಾದನಾ ಘಟಕ, ಪ್ರಯೋಗಾಲಯ, ವೀಕ್ಷಣಾಲಯಗಳನ್ನು ನೋಡಿದೆ. ಅವನ್ನೆಲ್ಲ ನೋಡಿದ ಮೇಲೆ ಮತ್ತೆ ಏರ್ ಕಾರ್ ಹತ್ತಿ ಕೂತೆವು. ಆದರೆ ಅದು ಹೊರಟಕೂಡಲೇ ಅದು ಹೇಗೋ ನಾನು ಜಾರಿ ಬಿದ್ದೆ. ಜಾರುವಿಕೆ ನನ್ನನ್ನು ಕನಸಿನಿಂದ ಎಳೆತಂದಿತು. ಕಣ್ತೆರೆದಾಗ ನನ್ನ ಮಲಗುವ ಕೋಣೆಯ ಈಸಿಚೇರಿನಲ್ಲಿ ಒರಗಿ ತೂಕಡಿಸುತ್ತ ಇದ್ದೆ!

(ಇಂಗ್ಲಿಷ್‌ನಲ್ಲಿ ಬರೆಯಲ್ಪಟ್ಟ ಈ ಬರಹ ಮೊದಲು ೧೯೦೫ರಲ್ಲಿ ಮದ್ರಾಸಿನ ‘ಇಂಡಿಯನ್ ಲೇಡೀಸ್ ಮ್ಯಾಗಜೀನ್’ನಲ್ಲಿ ಪ್ರಕಟವಾಯಿತು.)

ಕನ್ನಡಕ್ಕೆ: ಡಾ. ಎಚ್. ಎಸ್. ಅನುಪಮಾ, ಕವಲಕ್ಕಿ.
***

(ಬೇಗಂ ರುಖಿಯಾ ಶೆಖಾವತ್ ಹುಸೇನ್ (೧೮೮೦-೧೯೩೨) ೨೦ನೇ ಶತಮಾನದ ಅವಿಭಜಿತ ಬಂಗಾಳದ ಪ್ರಮುಖ ಲೇಖಕಿ. ರಂಗಾಪುರ ಜಿಲ್ಲೆಯ ಪೈರಾಬೊಂದ್‌ನಲ್ಲಿ ಹುಟ್ಟಿದ ರುಖಿಯಾಗೆ ೧೬ ವರ್ಷವಾದಾಗ ಮದುವೆಯಾಯಿತು. ಆಕೆಯನ್ನು ಮದುವೆಯಾದವರು ಖಾನ್ ಬಹಾದುರ್ ಶೆಖಾವತ್ ಹುಸೇನ್ ಎಂಬ ೩೬ ವರ್ಷದ ವಿಧುರರು. ಇಂದಿನ ಬಿಹಾರದ ಭಾಗಲ್ಪುರದ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿದ್ದ ಅವರು ಉದಾರ ಮನಸಿನವರು. ತಮ್ಮ ಪತ್ನಿ ಬುರ್ಖಾ ತೊಡುವುದು ಬೇಡವೆಂದು ಹೇಳಿ ಇಂಗ್ಲಿಷ್ ಮತ್ತು ಬಂಗಾಳಿಯನ್ನು ಕಲಿಸುವ ವ್ಯವಸ್ಥೆ ಮಾಡಿದ ಶೆಖಾವತ್ ರುಖಿಯಾಗೆ ಬರೆಯಲು, ಅದರಲ್ಲೂ ಬಂಗಾಳಿಯಲ್ಲೇ ಬರೆಯಲು ಪ್ರೋತ್ಸಾಹಿಸಿದರು. ಹೀಗೆ ಗಂಡನ ಒತ್ತಾಸೆಯಿಂದ ೧೯೦೨ರಲ್ಲಿ ರುಖಿಯಾ ಬರೆದ ಮೊದಲ ಬಂಗಾಳಿ ಬರಹ ಪಿಪಾಸಾ ಪ್ರಕಟವಾಯಿತು. ನಂತರ ಅವರ ಪೆನ್ನು ವಿಶ್ರಾಂತಿ ಪಡೆಯಲೇ ಇಲ್ಲ. ಅಂದಿನ ಪ್ರಮುಖ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆದರು. ೧೯೦೫ರಲ್ಲಿ ಮೋತಿಚೂರ್, ೧೯೦೮ರಲ್ಲಿ ಸುಲ್ತಾನಾಸ್ ಡ್ರೀಂ ಎಂಬ ಇಂಗ್ಲಿಷ್ ಕೃತಿ, ಪದ್ಮರಾಗ ಎಂಬ ಕಾದಂಬರಿ ಪ್ರಕಟವಾದವು. 

೧೯೦೯ರಲ್ಲಿ ಪತಿ ತೀರಿಕೊಂಡಾಗ ಅವರಿಚ್ಛೆಯಂತೆ ಭಾಗಲ್ಪುರದಲ್ಲಿ ಮುಸ್ಲಿಂ ಹುಡುಗಿಯರ ಪ್ರಾಥಮಿಕ ಶಾಲೆ ತೆರೆದರು. ತಮ್ಮ ಬರವಣಿಗೆಗಳಲ್ಲಿ ವ್ಯಂಗ್ಯವಾಗಿ, ವಿಡಂಬನಾತ್ಮಕವಾಗಿ ಅವರು ಪರ್ದಾ ಪದ್ಧತಿಯನ್ನು ಟೀಕಿಸಿದರು. ತಮಾಷೆ, ವ್ಯಂಗ್ಯ, ವಿಡಂಬನೆಗಳ ಮೂಲಕ ಬಂಗಾಳಿ ಮುಸ್ಲಿಂ ಹೆಣ್ಮಕ್ಕಳು ಅನುಭವಿಸುವ ತಾರತಮ್ಯ ವಿವರಿಸಿದರು. ಪತ್ರಿಕೆಗಳಲ್ಲಿ ಕತೆ, ಕವಿತೆ, ಕಾದಂಬರಿ, ಲೇಖನ ಬರೆದರು. ಮುಸ್ಲಿಂ ಮಹಿಳೆಯರ ಸಂಘಟನೆ ಶುರುಮಾಡಿದರು. ತೀವ್ರ ನಿರ್ಬಂಧ, ಪ್ರತಿಕೂಲ ಪರಿಸ್ಥಿತಿಗಳ ನಡುವೆ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದರು, ದಿಟ್ಟವಾಗಿ ಬರೆದರು, ಮಹಿಳೆಯರ ಸಂಘಟಿಸಿದರು. ಇವತ್ತಿನ ಇಸ್ಲಾಂ ವಿರೂಪಗೊಂಡಿರುವುದಷ್ಟೇ ಅಲ್ಲ, ಭ್ರಷ್ಟಗೊಂಡಿದೆ ಎಂದು ಅವರಿಗೆ ಅನಿಸಿತು. ‘ಹೆಣ್ಣುಮಕ್ಕಳು ಓದಿದರೆ ಕೆಟ್ಟುಹೋಗುತ್ತಾರೆನ್ನುವುದು ಸುಳ್ಳು. ತಮ್ಮನ್ನು ಮುಸ್ಲಿಂ ಎಂದು ಕರೆದುಕೊಳ್ಳುವ ಗಂಡಸರು ಮಹಿಳೆಯರಿಗೂ ಸಮಾನ ಶಿಕ್ಷಣದ ಹಕ್ಕು ನೀಡಿದ ಇಸ್ಲಾಮಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಶಿಕ್ಷಣ ಪಡೆದ ಗಂಡಸು ಹಾಳಾಗಿಹೋಗುವುದಿಲ್ಲ ಎಂದಾದರೆ ಹೆಣ್ಣೇಕೆ ಹಾಳಾಗುತ್ತಾಳೆ?’ ಎಂದು ಪ್ರಶ್ನಿಸಿದರು. ಗಾಡ್ ಗಿವ್ಸ್, ಮೆನ್ ರಾಬ್ಸ್ ಎಂಬ ಪುಸ್ತಕ (೧೯೨೭) ಬರೆದರು.

ಶಾಲೆ ನಡೆಸುತ್ತ, ಬರವಣಿಗೆ ಮಾಡುತ್ತಲೇ ಇಸ್ಲಾಮಿಕ್ ಮಹಿಳಾ ಸಂಘಟನೆಯಾದ ‘ಅಂಜುಮನ್-ಇ-ಖವಾತೀನ್-ಇ-ಇಸ್ಲಾಂ’ ಶುರುಮಾಡಿದರು. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಪರಿಸ್ಥಿತಿಯ ಕುರಿತು ಚರ್ಚೆ, ಸಮ್ಮೇಳನ, ಸಂವಾದ ಏರ್ಪಡಿಸಿದರು. ಬ್ರಿಟಿಷ್ ಭಾರತದಲ್ಲಿ ಅತಿಸಾಂಪ್ರದಾಯಿಕತೆ ಮತ್ತು ಅತಿ ಧಾರ್ಮಿಕ ನಿಷ್ಠೆಯೇ ಮುಸ್ಲಿಂ ಸಮಾಜವು ಉಳಿದೆಲ್ಲ ಸಮಾಜಗಳಿಗಿಂತ ಹಿಂದುಳಿಯಲು ಕಾರಣವಾಗಿದೆ ಎಂದು ಪ್ರತಿಪಾದಿಸಿದ ಅವರು ತಮ್ಮ ಹುಟ್ಟುಹಬ್ಬದ ದಿನವೇ ೫೨ನೇ ವಯಸ್ಸಿಗೆ ತೀರಿಕೊಂಡರು. ಈಗಲೂ ಬಂಗ್ಲಾದಲ್ಲಿ ಡಿಸೆಂಬರ್ ೫ ‘ರುಖಿಯಾ ಡೇ’ ಎಂದು ಆಚರಿಸಲ್ಪಡುತ್ತದೆ.) 

Wednesday 23 December 2015

ಮಗಳ ಹೆಸರಲ್ಲಿ ಎಲ್ಲ ಇದೆ






ಹೆಣ್ಣು ಬೇಡದವಳು, ಅದರಲ್ಲೂ ಮದುವೆಯಾಗುವ ತನಕ ತಂದೆತಾಯಿಯರಿಗೆ ಜವಾಬ್ದಾರಿಯ ಹೊರೆ ಆದವಳು ಎನ್ನುವುದು ಬದುಕಿನ ಒಂದಲ್ಲಾ ಒಂದು ಗಳಿಗೆ ಎಲ್ಲ ಹೆಣ್ಮಕ್ಕಳ ಅನುಭವಕ್ಕೆ ಬಂದಿರುತ್ತದೆ. ವಿಜ್ಞಾನ ತಂತ್ರಜ್ಞಾನ ಮುಂದುವರೆದಷ್ಟೂ, ಅಭಿವೃದ್ಧಿ ಸೂಚ್ಯಂಕಗಳು ಏರಿದಷ್ಟೂ ಹೆಣ್ಣು ಬದುಕಿನ ಆಪತ್ತು ಹೆಚ್ಚತೊಡಗಿದೆ. ಒಂದು ಕಡೆ ಸ್ತ್ರೀಭ್ರೂಣ ಹತ್ಯೆ-ಸ್ತ್ರೀಶಿಶುಹತ್ಯೆ ಸಂಭವಿಸುತ್ತಿದ್ದರೆ; ಮತ್ತೊಂದೆಡೆ ನಿರ್ಲಕ್ಷ್ಯದಿಂದ ಹೆಣ್ಣುಮಕ್ಕಳ ಮರಣದ ಸಂಖ್ಯೆಯೂ ಹೆಚ್ಚುತ್ತಿದೆ. ಇದರ ನಡುವೆ ಅಂತೂಇಂತೂ ಭೂಮಿಗೆ ಬಂದ ಹೆಣ್ಣುಮಕ್ಕಳ ಪಾಲನೆ-ಪೋಷಣೆ-ರಕ್ಷಣೆ-ಮದುವೆ ಮೊದಲಾದ ಜವಾಬ್ದಾರಿಗಳಿಂದ ಸುಸ್ತಾಗಿ ‘ಸಾಕಪ್ಪಾ’ ಎನ್ನುವ ಪಾಲಕರ ನಿಟ್ಟುಸಿರು ಅವರಿಗಿಟ್ಟ ಹೆಸರುಗಳಲ್ಲಿ ವ್ಯಕ್ತವಾಗುತ್ತದೆ. ನಮ್ಮಲ್ಲಿ ಅಸಂಖ್ಯ ಸಾಕಮ್ಮ, ಸಾಕವ್ವಗಳಿದ್ದಾರೆ. ಅವರೆಲ್ಲ ಮಕ್ಕಳು ಸಾಕೆನಿಸಿದ ಮೇಲೆ, ಅದರಲ್ಲೂ ಹೆಣ್ಣುಮಕ್ಕಳು ಸಾಕಾದ ಮೇಲೆಯೇ ಹುಟ್ಟಿದವರು. ಮತ್ತೆ ಕೆಲವು ಕಡೆ ‘ಸಾಕು ಸಾವಿತ್ರಿ, ಬೇಕು ಬೆನಕ’ ಮಾತು ಚಾಲ್ತಿಯಲ್ಲಿದೆ. ಹೆಣ್ಣು ಸಾಕೆನಿಸಿದರೆ ಅವರಿಗೆ ಸಾವಿತ್ರಿ ಎಂದು ಹೆಸರಿಡುವುದು, ಮತ್ತೆ ಗಂಡು ಬೇಕೆನಿಸಿದರೆ ಹುಟ್ಟಿದ ಗಂಡಿಗೆ ಬೆನಕ (ವಿನಾಯಕ)ನಿಗೆ ಸಂಬಂಧಪಟ್ಟ ಹೆಸರಿಡುವುದು ಚಾಲ್ತಿಯಲ್ಲಿದೆ.

ಲಿಂಗ ಅಸಮಾನತೆ, ತಾರತಮ್ಯಕ್ಕೆ ಎಷ್ಟೆಲ್ಲ ಮುಖಗಳು! ಮಗುವಿಗಿಡುವ ಹೆಸರಿನಲ್ಲೂ ಅದು ವ್ಯಕ್ತವಾಗುತ್ತದೆಯೆ? ಹೌದು. ಮೊನ್ನೆ ಈಚೆಗೆ ಇಪಿಡಬ್ಲ್ಯು ಪತ್ರಿಕೆಯಲ್ಲಿ ಓದಿದ ಸರ್ವೇ ಮತ್ತು ವರದಿ ಆ ಸುದ್ದಿಯ ಆಳಕ್ಕಿಳಿದು ನೋಡುವಂತೆ ಮಾಡಿತು.

ಅಕ್ಟೋಬರ್ ೨೦೧೧ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಜಿಲ್ಲಾಡಳಿತ ತನ್ನ ಜಿಲ್ಲೆಯ ಆಯ್ದ ೨೮೫ ಹೆಣ್ಣುಮಕ್ಕಳಿಗೆ ಬೇರೆ ಹೆಸರು ಇಡುವ ಸಮಾರಂಭವನ್ನು ಆಯೋಜಿಸಿತು. ಅಂದು ಮುಖ್ಯಮಂತ್ರಿಯಾಗಿದ್ದ ಪೃಥ್ವಿರಾಜ ಚವಾಣರ ಜಿಲ್ಲೆ ಸತಾರಾದಲ್ಲಿ ೧-೪೦ ವರ್ಷ ಒಳಗಿನ ಹೆಣ್ಮಕ್ಕಳು ತಮ್ಮ ಹೆಸರು ಬದಲಿಸಿಕೊಂಡರು. ಕೆಲವರು ಹೆಸರನ್ನು ತಾವೇ ಆಯ್ದುಕೊಂಡರೆ, ಮತ್ತೆ ಕೆಲವರಿಗೆ ತಾಯಿ/ಗೆಳತಿ/ಬಂಧು ಸೂಚಿಸಿದ ಹೆಸರಿಡಲಾಯಿತು. ೪ ವರ್ಷದ ನಕುಶಿ ಲೋಂಢೆ ಈಗ ಭಾಗ್ಯಶ್ರೀ ಆಗಿದ್ದರೆ, ನಕುಶಿ ಮಾನೆ (೧೧) ಈಗ ನಿಖಿತಾ. ನಕುಶ ರಾಥೋಡ್ (೧೩) ಐಶ್ವರ್ಯಾ ಆಗಿದ್ದರೆ ನಕುಶಿ ಭಿಷೆ (೧೭) ಪೂನಂ ಎಂದು ಹೆಸರಾದಳು. ನಕುಶಿ ಮೋರೆ (೧೬) ಸಂಚಿತಾ ಎಂದು ಹೆಸರಿಟ್ಟುಕೊಂಡರೆ ನಕುಶಿ ಚಂದ್ರಕಾಂತ ಪವಾರ್ (೧೧) ಈಗ ಕೋಮಲ್ ಆದಳು. ಅವರೆಲ್ಲರ ಹೆಸರು ಬದಲಾದ ಕುರಿತು ಸರ್ಕಾರ ಅಫಿಡವಿಟ್ ನೀಡಿತು. ಅಂದಿನಿಂದ ಅವರು ತಮ್ಮ ಹೊಸಹೆಸರುಗಳಲ್ಲಿ ವ್ಯವಹರಿಸಲು ಕಾನೂನಾತ್ಮಕ ಅನುಮತಿ ಸಿಕ್ಕಿತು. ಆ ಹೆಣ್ಣುಮಕ್ಕಳು ಶಾಲೆಗೆ ಹೋಗಿ ಬರಲು ಬಸ್ಸು ಸೇವೆ ಉಚಿತ, ಶಾಲೆಯ ಶುಲ್ಕ ರದ್ದು ಮಾಡಲಾಯಿತು. ಅವರ ಪಾಲಕರಿಗೆ ಉಚಿತ ಪಡಿತರ ನೀಡಲಾಯಿತು.

ಇದರಲ್ಲೊಂದು ವಿಶೇಷ ಗಮನಕ್ಕೆ ಬಂದಿರಬಹುದು: ಬದಲಾದ ಹೆಸರಿನವರೆಲ್ಲರ ಮೂಲ ಹೆಸರು ನಕುಶಿ, ನಕುಶ ಅಥವಾ ನಕೂಸಾ ಆಗಿತ್ತು; ಅವರೆಲ್ಲ ಹೆಣ್ಣುಮಕ್ಕಳಾಗಿದ್ದರು. ಮರಾಠಿಯಲ್ಲಿ ನಕುಶಿ ಎಂದರೆ ‘ಬೇಡವಾದ’, ‘ಒಲ್ಲದ’. ಕನ್ನಡದಲ್ಲಿ ‘ಒಲ್ಲವ್ವ’ ಅಂದ ಹಾಗೆ. ಅವರಲ್ಲಿ ಎಲ್ಲ ಹುಡುಗಿಯರು ಹಿಂದೂಧರ್ಮಕ್ಕೆ, ಅರ್ಧಕ್ಕಿಂತ ಹೆಚ್ಚು ಹುಡುಗಿಯರು ಮರಾಠಾ ಸಮುದಾಯಕ್ಕೆ ಸೇರಿದವರು. ಬಹುಪಾಲು ಗ್ರಾಮೀಣ ಪ್ರದೇಶದವರಾಗಿದ್ದು ೬೫% ಬಡವರು (ಮಾಸಿಕ ಆದಾಯ ೨೦೦೦ಕ್ಕಿಂತ ಕಡಿಮೆ) ಇದ್ದವರು. ಬಹುಪಾಲು ಪಾಲಕರು ಅಶಿಕ್ಷಿತರು ಅಥವಾ ಕಡಿಮೆ ಶಿಕ್ಷಣ ಪಡೆದವರು, ಕೃಷಿ ಕಾರ್ಮಿಕರು. ೨೬ ನಕುಶಿಗಳಿಗೆ ಮೂವರು ಅಕ್ಕಂದಿರಿದ್ದರು. ಹೆಚ್ಚುಕಮ್ಮಿ ಎಲ್ಲರೂ ಅವರ ತಾಯ್ತಂದೆಯರಿಗೆ ಮೂರನೇ ಅಥವಾ ನಾಲ್ಕನೇ ಹೆಣ್ಣುಮಗು.

ದೇಶದ ಅತಿ ಕಡಿಮೆ ಲಿಂಗಸರಾಸರಿ ಇರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಐದನೆಯದು. ಕಳೆದ ದಶಕದಲ್ಲಿ ಲಿಂಗ ಸರಾಸರಿ ಅಲ್ಲಿ ನಿರಂತರ ಇಳಿಯುತ್ತ ಬಂದಿದೆ. ಸತಾರಾದಲ್ಲಿ ೧೦೦೦ ಗಂಡುಹುಡುಗರಿಗೆ ೮೮೦ ಹೆಣ್ಮಕ್ಕಳಿದ್ದಾರೆ. ಅಲ್ಲಿನ ಜನರಿಗೆ ‘ಹೆಣ್ಣುಮಗು ಬೆಳೆಸುವುದೂ ಒಂದೇ, ಪಕ್ಕದ ಮನೆ ತೋಟಕ್ಕೆ ನೀರು ಹಾಕೋದೂ ಒಂದೇ’ ಎಂಬ ಗಾದೆ ಮಾತಿನಲ್ಲಿ ನಂಬಿಕೆ. ಹೆಣ್ಣು ಎಂದರೆ ಹೊರೆ, ಅನಗತ್ಯ ಜವಾಬ್ದಾರಿ ಎಂದೇ ಬಹುಪಾಲು ಪಾಲಕರ ಅಭಿಪ್ರಾಯ. ವರದಕ್ಷಿಣೆಯಿಲ್ಲದೆ ಮದುವೆ ಮಾಡುವ ಯಾವ ಸಾಧ್ಯತೆಗಳೂ ಅವರಿಗಿಲ್ಲ. ಭಾರದ ವರದಕ್ಷಿಣೆ ಕೊಡದಿದ್ದರೆ ಅಥವಾ ಕೇಳಿದ್ದಕ್ಕಿಂತ ಕಡಿಮೆ ಕೊಟ್ಟರೆ ತಮ್ಮ ಮಗಳನ್ನು ಗಂಡನ ಮನೆಯವರು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂಬ ನಂಬಿಕೆ ಬಲವಾಗಿದೆ. ವರದಕ್ಷಿಣೆ-ಮದುವೆ ಎಂಬ ಸಾಲಸೋಲದ ಬಾಬ್ತು ಹೆಣ್ಣುಮಗುವನ್ನು ‘ಬೇಡದವಳಾಗಿ’ಸಿದೆ. ಜೊತೆಗೆ ‘ಒಬ್ಬನಾದ್ರು ಮಗ ಬೇಕು, ಇಲ್ಲಂದ್ರ ಆಸ್ತಿಯೆಲ್ಲ ಬ್ಯಾರೇವ್ರಿಗೆ ಹೋಗತದ’ ಎಂಬ ಅಭಿಪ್ರಾಯ ಗಂಡುಮಗುವಿಗಾಗಿ ಹಂಬಲಿಸುವಂತೆ ಮಾಡುತ್ತದೆ. ಮಗನಿಗೆ ಆಸ್ತಿ ಹೋದರೆ ತಮ್ಮವರಿಗೆ ಹೋದಂತೆ; ಮಗಳಿಗೆ ಆಸ್ತಿ ಹೋದರೆ ‘ಬೇರೆ’ಯವರಿಗೆ ಹೋದಂತೆ ಎಂದೇ ತಿಳಿಯಲಾಗಿದೆ. ‘ನೂರು ಮಗನ ತಾಯಾಗು’, ‘ಹುಡುಗ ಹುಟ್ಟಲಿ’ ಎಂಬ ಆಶೀರ್ವಾದ ಮಾಮೂಲಾಗಿ ಕೇಳಿಸುತ್ತದೆ.

ಗಂಡು ಬಯಕೆಯ, ಹೆಣ್ಣು ಬೇಡದ ಸಮಾಜದ ಇವೆಲ್ಲ ನಂಬಿಕೆ, ಅಭಿಪ್ರಾಯಗಳು ಹೆಣ್ಣುಮಕ್ಕಳಿಗಿಡುವ ಹೆಸರಿನಲ್ಲು ಸೂಚಿತವಾಗುತ್ತವೆ. ಮೇಲೆಮೇಲೆ ಹೆಣ್ಣು ಹುಟ್ಟುವಾಗ ಒಂದಕ್ಕೆ ನಕುಶಿ/ನಕೂಸಾ ಎಂಬ ಹೆಸರಿಟ್ಟು; ಅದು ತಮಗೆ ಒಲ್ಲದ್ದು ಎಂದು ಬಹಿರಂಗವಾಗಿ ತೋರಿಸಿದರೆ ಹೆಣ್ಣು ಹುಟ್ಟಿಸಿದ ದೇವರಿಗೆ ನರಮನುಷ್ಯರ ಸಿಟ್ಟು ಅರ್ಥವಾಗಿ ಮುಂದಿನದು ಗಂಡೇ ಹುಟ್ಟುತ್ತದೆ ಎಂಬ ನಂಬಿಕೆ ಅಲ್ಲಿದೆ. ಹೆಣ್ಣಿಗೆ ಹಾಗೆ ಹೆಸರಿಟ್ಟ ನಂತರ ಕೆಲವರಿಗೆ ಗಂಡೂ ಹುಟ್ಟಿವೆ. ನಂತರ ಹೆಣ್ಣು ಹುಟ್ಟಿದವರೂ ಇಲ್ಲದಿಲ್ಲ. ಅಂಥ ಹೆಣ್ಮಕ್ಕಳಿಗೆ ‘ಸೀಮಾ’ ಎಂದು ಹೆಸರಿಸಿದ್ದಾರೆ. ‘ತಮ್ಮ ಸಹನೆಗೆ, ಕಾಯುವಿಕೆಗೆ ಇದೇ ಕೊನೆ(ಸೀಮಾ)’ ಎಂಬರ್ಥದಲ್ಲಿ ದೇವರಿಗೆ ಹಾಕಿರುವ ಧಮಕಿ ಆ ಹೆಸರು!

ಈ ನಕೂಸಾಗಳು ಬರೀ ಹೆಸರಿನಲ್ಲಷ್ಟೆ ಬೇಡದ ಮಗು ಅಲ್ಲ, ನಿಜವಾಗಲೂ ಬೇಡದ ಮಗುವಿನಂತೇ ಅವರನ್ನು ನಡೆಸಿಕೊಂಡಿರುವುದು ಹುಡುಗಿಯರ ಮಾತುಗಳಿಂದ ತಿಳಿಯುತ್ತದೆ. ಮೊದಲೇ ಹೆಣ್ಣು ಹುಟ್ಟಿದರೆ ನಾಮಕರಣ ಅದ್ದೂರಿಯದಲ್ಲ, ಅದರಲ್ಲು ನಕುಶಿ ಹೆಣ್ಣುಮಕ್ಕಳಿಗೆ ನಾಮಕರಣ ಮಾಡುವುದಿಲ್ಲ. ಒಬ್ಬ ತಾಯಿ ಹೇಳಿದಂತೆ, ‘ಉಳದ ಹೆಣ್ಮಕ್ಕಳಿಗಿ ಕಿವಿ ಚುಚ್ಚಿ ಬಂಗಾರದ ವಾಲಿ ಇಟ್ಟಿವ್ರಿ. ನಕುಸಗೆ ಬಂಗಾರ ಇಡಂಗಿಲ್ರಿ. ಹಂಗರೆ ದೇವ್ರಿಗೆ ನಮ್ಗೆ ಬ್ಯಾಸ್ರ ಆಗೇದಂತ ತಿಳದು ಮುಂದ ಗಂಡು ಕೊಡಲಿ ಅಂತರಿ..’

ಇಂಥಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿಸುವ, ಲಿಂಗ ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ತೆಗೆದುಕೊಂಡ ಹಲವು ಕ್ರಮಗಳಲ್ಲಿ ಹೆಸರು ಬದಲಿಸುವ ಅಭಿಯಾನವೂ ಒಂದು. ಆದರೆ ಹೆಸರೇನೋ ಬದಲಿಸಲಾಯಿತು. ಆಮೇಲೇನಾಯಿತು? ಆ ಸಂದರ್ಶನ, ಅಧ್ಯಯನದ ವಿವರಗಳು ನಮ್ಮ ದೇಶದ ಗ್ರಾಮೀಣ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿವೆ.

ಹೆಸರು ಬದಲಿಸಿದ ಎರಡು ವರ್ಷ ನಂತರ ಸತಾರಾ, ಜಾವೊಳಿ, ಮಹಾಬಲೇಶ್ವರ್, ಫಲ್ತಾನ್, ಕೋರೆಗಾಂವ್, ಕರಾಡ್ ಮತ್ತು ಪಟನಾ ತೆಹಶೀಲುಗಳಲ್ಲಿ ಸರ್ವೇ ನಡೆಯಿತು. ೪೨ ಹಳ್ಳಿಗಳ ೭೭ ಕುಟುಂಬಗಳ ೧೦೦ ಹೆಣ್ಮಕ್ಕಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಅಧ್ಯಯನ, ಸಂದರ್ಶನ ನಡೆಯಿತು. ೧೦ ವರ್ಷ ಮೇಲ್ಪಟ್ಟ ೪೨ ಹುಡುಗಿಯರ ಸಂದರ್ಶನ ಮಾಡಲಾಯಿತು.

ಅವರಲ್ಲಿ ೫೬% ವಿದ್ಯಾರ್ಥಿನಿಯರಾಗಿದ್ದರು. ೧೦% ಹೆಣ್ಮಕ್ಕಳು ಕೂಲಿ ಮಾಡುತ್ತಿದ್ದರು. ಬಹಳಷ್ಟು ಪಾಲಕರು ತಮ್ಮ ಮಕ್ಕಳ ಮುಂದೆಯೇ ಅವರು ಬೇಡದವರು ಎಂದು ಹೇಳಿದಾಗ ಹದಿಹರೆಯದ ಕೆಲ ಹೆಣ್ಮಕ್ಕಳು ಮುಖ ಸಣ್ಣ ಮಾಡಿಕೊಂಡು ಸಂದರ್ಶಕರೆದುರು ಅತ್ತವು. ಒಬ್ಬಳು ಮೊದಲು ತನಗೆ ತನ್ನ ಹೆಸರಿನ ಅರ್ಥ ತಿಳಿದಿರಲಿಲ್ಲವೆಂದೂ, ಉಳಿದ ಹುಡುಗರು ಛೇಡಿಸಿದಾಗ ತಿಳಿಯಿತೆಂದೂ, ಆಗ ಬಹಳ ಬೇಸರವಾಯಿತೆಂದೂ ಹೇಳುತ್ತ ಬಿಕ್ಕಿದಳು. ಮತ್ತೊಬ್ಬ ನಕೂಸ ‘ಯಾರಾದ್ರೂ ನನ್ ಹೆಸ್ರು ಕೇಳಿದ್ರೆ ಹೇಳಕ್ಕೆ ನಾಚ್ಗೆ ಆಗದು, ಅವ್ರೆಲ್ಲಿ ನಗಾಡ್ತಾರೊ ಅಂತ ಅಂಜಿಕಿ ಆಗದು. ನನ್ನ ಎಲ್ಲ ನಕೆ ಅಂತ ಗಿಡ್ಡ ಹೆಸರಿಂದೆ ಕರೆಯೋರು. ಇನ್ಮೇಲೆ ನನ್ ಹೆಸ್ರು ಬೇರೆ ಆಗಿದೆ. ಇದುವರ‍್ಗೆ ನಾ ಬೇಡಾಗಿದ್ದೆ, ಇನ್ನು ಬೇಕಾದೋಳು ಅಂತ ಆಗೋಹಂಗೆ ಸಾದಿಸಿ ತೋರುಸ್ತೀನಿ’ ಎಂದು ತನ್ನ ಹೊಸ ಹೆಸರಿನ ಬಗೆಗೆ ಭರವಸೆ, ಅಭಿಮಾನ ವ್ಯಕ್ತಪಡಿಸಿದಳು. ೩೦ ರ ಆಸುಪಾಸಿನ ನಕುಶಿ ಒಬ್ಬಳು, ‘ಅಪ್ಪ ಅವ್ವಿ ಉಳಿದ ಅಣ್ತಮಂದ್ರು, ಅಕ್ತಂಗೇರಿಗೆ ಪ್ರೀತಿ ಮಾಡ್ತ ನನ್ನನ್ನ ಮಾತ್ರ ದೂರ ಇಡೊರು. ಎಷ್ಟ್ ಬೇಸ್ರ ಆಗದಂದ್ರೆ ಇವ್ರು ಹುಟ್ಸಿದ್ ಕೂಡ್ಲೆ ಯಾಕ್ ಕೊಂದ್ ಹಾಕ್ಲಿಲ್ಲ ಅನ್ಸದು’ ಎಂದಳು. ೧೫ ವರ್ಷದ ಈಗ ಸುನಿತ ಆಗಿರುವ ನಕೂಸ, ‘ಈಗ್ಲೂ ಅದೇ ಹಳೇ ಹೆಸರಿಂದ್ಲೆ ಕರಿತಾರೆ. ನಿಮ್ಮನೆಯೋರ್ಗೇ ನೀ ಬ್ಯಾಡ, ಸರ್ಕಾರ ಹೊಸ ಹೆಸರಿಟ್ರೆ ಏನ್ ಪ್ರಯೋಜ್ನ ಅಂತಾರೆ’ ಎಂದು ತನ್ನ ಅಳಲು ತೋಡಿಕೊಂಡಳು. ೨೫ ವರ್ಷದ ನಕುಶಿ, ಶಾಲೆ ಕಲಿಯುವಾಗ ಮಾಸ್ತರು ‘ನಕುಸ’ ಪದ ಒಡೆದು ಬಿಡಿಸಲು ಹೇಳಿದಾಗ ಇವಳು ಸುಮ್ಮನೆ ನಿಂತದ್ದು ನೋಡಿ ಸಿಟ್ಟಿನಿಂದ ‘ನಕೊ ಅಸ್ಲೇಲಿ ಮೂಳ್ಗಿ = ನಕೂಸಾ’ ಎಂದು ಪದ ಬಿಡಿಸಿದರೆಂದೂ; ಆಗ ಸಹಪಾಠಿಗಳೆಲ್ಲ ನಗಾಡಿ ತನಗೆ ಅವಮಾನವಾಗಿದ್ದನ್ನೂ ನೆನಪಿಸಿಕೊಂಡಳು.

ಆದರೆ ಪಾಲಕರಿಗೆ ಈ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಅಳುವ ಮಗಳನ್ನು ನೋಡುತ್ತಿದ್ದರೂ ವಿಚಲಿತರಾಗದೆ ಗಂಡು ಹುಟ್ಟದ ತಮ್ಮ ಕಷ್ಟಗಳ ಬಗೆಗೆ, ಹುಟ್ಟಿದ ಹೆಣ್ಣುಮಕ್ಕಳನ್ನು ಮದುವೆಯ ತನಕ ರಕ್ಷಿಸಿ ವರದಕ್ಷಿಣೆ ತೆತ್ತು ದಾಟಿಸಬೇಕಾದ ಸಂಕಷ್ಟದ ಬಗೆಗೆ ಹೇಳಿಕೊಳ್ಳುತ್ತ ಹೋದರು. ಬಹುಪಾಲು ಅಮ್ಮಂದಿರು ಬರಿ ಹೆಣ್ಣು ಹೆತ್ತದ್ದಕ್ಕೆ ದೈಹಿಕ, ಮಾನಸಿಕ ಹಿಂಸೆಗೆ ನಿರಂತರ ಒಳಗಾಗುತ್ತಿದ್ದದ್ದು ಅವರ ಮಾತುಗಳಲ್ಲಿ ವ್ಯಕ್ತವಾಯಿತು. ಹಾಗಾಗಿ ತಾಯಂದಿರಿಗೇ ಗಂಡುಮಗುವಿನ ತೀವ್ರ ಹಂಬಲ ಇರುವುದು ಮಾತಿನಲ್ಲಿ ತಿಳಿದುಬರುತ್ತಿತ್ತು. ಈಗ ಐಶ್ವರ್ಯ ಆಗಿರುವ ನಕೂಸಳ ಅಪ್ಪ ತಾನು ಮಗಳನ್ನು ಹಳೆಯ ಹೆಸರಲ್ಲೆ ಕರೆಯುವುದಾಗಿ ವಾದಿಸಿದ. ‘ನಾಯಾಕೆ ಸರಕಾರದೋರು ಇಟ್ಟ ಹೆಸರಿಂದೆ ಕರಿಬೇಕು? ಅವ್ಳು ಈಗೂ ನಮ್ಗೆ ಬ್ಯಾಡಾದವ್ಳೆಯ. ಸರ್ಕಾರ ಅವಳ ಮದುವಿ ತಂಕ ರೊಕ್ಕ ಕೊಡಲಿ, ವರದಕ್ಷಿಣಿ ರೊಕ್ಕ ಕೊಡಲಿ, ಆಗ ನಾನು ಅವರಿಟ್ಟ ಹೆಸ್ರು ಕರಿತೇನಿ’ ಎಂದ!

ಇಲ್ಲಿ ಪಾಲಕರು ಅಲ್ಟ್ರಾಸೌಂಡ್ ತಂತ್ರಜ್ಞಾನ ಬಳಸಿ ಹೆಣ್ಣು ಭ್ರೂಣ ಹತ್ಯೆ ಮಾಡಲಿಲ್ಲ, ಅಥವಾ ಮಗು ಹುಟ್ಟಿದ ಮೇಲೆ ಹೆಣ್ಣು ಶಿಶು ಹತ್ಯೆಯನ್ನೂ ಮಾಡಲಿಲ್ಲ. ಆದರೆ ಹುಟ್ಟಿದ ಹೆಣ್ಣಿನ ಮೇಲೆ ತಮ್ಮ ಅಸಮಾಧಾನ ತೋರಿಸಿ ದೇವರು ಮುಂದಾದರೂ ಗಂಡು ಕೊಡಲಿ ಎಂದು ಹಾರೈಸಿದರು!

***

ಹೆಸರಲ್ಲೇನಿದೆ ಎನ್ನಬಹುದು. ಇದೆ, ಪಾಲಕರು ಮಕ್ಕಳಿಗಿಡುವ ಹೆಸರಲ್ಲಿ ಎಲ್ಲ ಇದೆ. ಅವರ ನಿರೀಕ್ಷೆ, ಕನಸು, ಆಸೆನಿರಾಸೆ, ಕಷ್ಟ - ಎಲ್ಲವೂ. ಆದರೆ ತವರಿನವರು ಇಟ್ಟ ಹೆಸರನ್ನು ಗಂಡನ ಮನೆಗೆ ಹೋಗುವಾಗ ಈಗಲೂ ಬದಲಾಯಿಸಿಕೊಳ್ಳಬೇಕಾಗಿರುವ ಕಾಲದಲ್ಲಿ ತವರಿಗೂ ತಂಗಿ ಬೇಡದವಳೆನಿಸಿಕೊಂಡು ಬದುಕಬೇಕಿರುವುದು ಕಾಲದ ದುರಂತವಾಗಿದೆ.

ಹಚ್ಚಡದ ನೇಯ್ಗೆಯಲ್ಲಿ ತಾರತಮ್ಯದ ಎಳೆಗಳೂ ಇರುತ್ತವೆ, ಅವುಗಳ ಹಲವು ಅವತಾರಗಳನ್ನು ಗುರುತಿಸಬೇಕು ಅಷ್ಟೆ.  ಭಾರತೀಯ ಸಮಾಜದ ಅಸಂಖ್ಯ ಸನ್ನೆ, ಸಂಜ್ಞೆ, ಸೂಕ್ಷ್ಮಗಳು ಲಿಂಗತಾರತಮ್ಯವನ್ನು ಎತ್ತಿ ತೋರಿಸುತ್ತವೆ. ಹೆಣ್ಣನ್ನು ದೇವರೆಂದು, ಹೆಣ್ಣಿರುವಲ್ಲಿ ದೇವತೆಯಿರುವಳೆಂದು ಪೂಜಿಸಿದ ಸಂಸ್ಕೃತಿ ನಮ್ಮದು ಎಂದು ಕೊಚ್ಚಿಕೊಳ್ಳುವ ಈ ನಾಡಿನಲ್ಲಿ ವರದಕ್ಷಿಣೆಯಿಲ್ಲದೆ ಹೆಣ್ಮಕ್ಕಳ ಮದುವೆ ಮಾಡಲಾಗದಿರುವುದು ಬಹುಪಾಲು ಬಡ ಕುಟುಂಬಗಳ ಸಂಕಷ್ಟಕ್ಕೆ ಕಾರಣವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಹಾಗೂ ನಂತರ ಎಷ್ಟು ವರದಕ್ಷಿಣೆ ನಿಷೇಧ ಕಾಯ್ದೆಗಳು ಬಂದವು? ಆದರೆ ಈಗಲೂ ಆ ಕುರಿತು ಜನರ, ತರುಣರ ಅಭಿಪ್ರಾಯವೇನಾದರೂ ಬದಲಾಗಿದೆಯೆ?

ಒಟ್ಟಾರೆ ಯಾವುದೇ ಸಾಮಾಜಿಕ ಬದಲಾವಣೆಯೂ ಕೇವಲ ಕಾನೂನುಗಳಿಂದ ಸಾಧ್ಯವಾಗುವುದಿಲ್ಲ; ಬಾಧಿತ ಎಚ್ಚೆತ್ತು ಹೋರಾಡಬೇಕು ಹಾಗೂ ಸಮಾಜ ಬದಲಾವಣೆಯ ಯತ್ನದಲ್ಲೊಮ್ಮೆ ಹೊರಳಬೇಕು; ಆಗ ಮಾತ್ರ ನಕುಸ ಎಂದು ಹೆಸರಿಟ್ಟರೇನಂತೆ, ತಾನು ಎಲ್ಲರಿಗು ಬೇಕಾದವಳಾಗಿ ಬದುಕುವೆನೆಂಬ ಆತ್ಮವಿಶ್ವಾಸವನ್ನು ಹೆಣ್ಣು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.



Tuesday 15 December 2015

ನಜೀಂ ಹಿಕ್ಮತ್ ಕವಿತೆಗಳು




(ಚಿತ್ರ: ವೆನಿಜುವೆಲಾ ಅಧ್ಯಕ್ಷ ಹ್ಯೂಗೋ ಷಾವೆಜ್ ಜೈಲಿನಲ್ಲಿದ್ದಾಗ 1992ರಲ್ಲಿ ಬರೆದ ಚಿತ್ರ)
೧  ಭಾವೀ ಜೈಲುವಾಸಿಗಳಿಗೆ ಕೆಲ ಸಲಹೆಗಳು

ಜೈಲೊಳಗಿದ್ದು ಪತ್ರಗಳಿಗಾಗಿ ಕಾಯುವುದು
ವಿಷಾದ ಗೀತೆಗಳ ಹಾಡುವುದು
ರಾತ್ರಿಯಿಡೀ ನಿದ್ದೆಗೆಟ್ಟು
ಸೂರು ದಿಟ್ಟಿಸುತ್ತ ಮಲಗುವುದು
ಮಧುರವೇ ಇರಬಹುದು,
ಆದರೆ ಅಪಾಯಕಾರಿ.

ಒಂದು ಕ್ಷೌರದಿಂದ ಮತ್ತೊಂದಕ್ಕೆ
ನಿನ್ನ ಮುಖ ಗಮನಿಸು
ವಯಸ್ಸು ಮರೆತುಬಿಡು,
ಹೇನುಗಳಿಗಾಗಿ ಹುಡುಕು.
ವಸಂತ ರಾತ್ರಿಗಳ ನಿರೀಕ್ಷಿಸು
ರೊಟ್ಟಿಯ ಕೊನೆ ತುಂಡನ್ನೂ ತಿನ್ನಲು ಮರೆಯದಿರು
ಎದೆತುಂಬಿ ನಗದೆ ಇರಬೇಡ
ಯಾರಿಗೆ ಗೊತ್ತು
ನೀ ಪ್ರೇಮಿಸುವ ನಿನ್ನವಳು ಪ್ರೀತಿ ನಿಲಿಸಬಹುದು
ಅದೇನು ಮಹಾ ಎನಬೇಡ
ಹಸಿರು ಮರವೊಂದು ಉರುಳಿ ಒಳಗೇ ನಿನ್ನಮೇಲೆ ಬಿದ್ದಂತೆ ಅದು

ಒಳ ಕುಳಿತು ಹೂದೋಟ, ಗುಲಾಬಿಗಳ ಕುರಿತು
ಯೋಚಿಸುವುದು ತರವಲ್ಲ
ಕಡಲು, ಪರ್ವತಗಳ ಬಗೆಗೆ ಯೋಚಿಸು
ಪುರುಸೊತ್ತಿಲ್ಲದಷ್ಟು ಓದು, ಬರೆ
ನೇಯುವುದು, ಕನ್ನಡಿ ಮಾಡುವುದೂ
ಒಳ್ಳೆಯದೆಂದು ನನ್ನ ಸಲಹೆ
ಅಂದರೆ,
ಹತ್ತು ಹದಿನೈದು ವರುಷ
ಒಳಗಿದ್ದು ಕಳೆಯಲಾಗದೆಂದಲ್ಲ
ಇರಬಹುದು
ಎಲ್ಲಿಯವರೆಗೆ ನಿನ್ನೆದೆಯ ಎಡಭಾಗದ ಒಡವೆ
ತನ್ನ ಹೊಳಪು ಕಳಕೊಳ್ಳುವುದಿಲ್ಲವೋ
ಅಲ್ಲಿಯವರೆಗೆ..

(ಮೇ ೧೯೪೯)

೨  ಬದುಕು


ಒಂದುವೇಳೆ
ದೊಡ್ಡ ಕಾಯಿಲೆಗೆ ತುತ್ತಾಗಿ
ಆಪರೇಷನ್ ಆಗಲೇಬೇಕಿದೆ ಎಂದುಕೋ
ಓಟಿಯ ಆ ಬಿಳಿ ಮೇಜಿನಿಂದ ನಾವು
ಮೇಲೇಳದೆ ಇರಬಹುದು
ಇಷ್ಟು ಬೇಗ ಸಾಯಬೇಕಲ್ಲ ಎಂದು
ಕೊಂಚ ದುಃಖವೂ ಇರಬಹುದು
ಆದರೂ
ಜೋಕು ಕೇಳಿ ನಗುತ್ತೇವೆ,
ಕಿಟಿಕಿಯಾಚೆ ಮಳೆಯಾಗುತ್ತಿದೆಯೇ ನೋಡುತ್ತೇವೆ,
ಕುತೂಹಲ ಆತಂಕದಿಂದ
ಬ್ರೇಕಿಂಗ್ ನ್ಯೂಸ್‌ಗಾಗಿ ಎದುರು ನೋಡುತ್ತೇವೆ..

ಒಂದುವೇಳೆ
ಹೋರಾಡಲೇಬೇಕಾದ ಕಾರಣಕೆ
ರಣರಂಗದಲ್ಲಿರುವೆವು ಎಂದುಕೊ
ಅಲ್ಲಿ, ಮೊದಲ ದಿನದ ಮೊದಲ ದಾಳಿಯಲ್ಲೇ
ಮಕಾಡೆ ಬಿದ್ದು ನಾವು ಸಾಯಬಹುದು.
ಸಿಟ್ಟುಆತಂಕಗಳೊಡನೆ ನಮಗಿದು ಗೊತ್ತಿರಲೂಬಹುದು.
ಆದರೂ
ವರುಷಗಟ್ಟಲೆ ನಡೆಯಲಿರುವ ಯುದ್ಧದ ಕುರಿತು
ಅದರ ಪರಿಣಾಮಗಳ ಕುರಿತು
ನಮ್ಮ ಕೊನೆಗಾಲದ ಕುರಿತು
ಚಿಂತಿಸುತ್ತೇವೆ

ನಾವು ಜೈಲಿನಲ್ಲಿರುವೆವೆಂದುಕೊಳ್ಳೋಣ
ವಯಸ್ಸು ಐವತ್ತರ ಹತ್ತಿರ
ಕಬ್ಬಿಣದ ಕದ ತೆರೆಯಲು
ಇನ್ನೂ ಹದಿನೆಂಟು ವರುಷ..
ಆದರೂ
ಗೋಡೆಗಳಾಚೆಗಿನ ಹೊರ ಜಗತ್ತಿನೊಡನೆ
ಜನ, ಪ್ರಾಣಿ, ಹೋರಾಟ, ಗಾಳಿಯೊಡನೆ
ಬದುಕುತ್ತೇವೆ

ಬದುಕನ್ನು ಎಷ್ಟು ಗಂಭೀರವಾಗಿ ಪರಿಭಾವಿಸಬೇಕೆಂದರೆ
ಎಪ್ಪತ್ತರಲ್ಲೂ ಆಲಿವ್ ಮರಗಳ ನೆಡಬೇಕು
ನಿನ್ನ ಮಕ್ಕಳು ಮೊಮ್ಮಕ್ಕಳಿಗೆಂದಲ್ಲ
ಸಾವಿನ ಭಯವಿದ್ದರೂ ಅದನು
ನಂಬುವುದಿಲ್ಲವೆಂದು ಹೇಳಲು,
ಬದುಕು ಅದಕಿಂತ ತೂಕದ್ದೆಂದು ತೋರಿಸಲು..

ಎಲ್ಲೇ ಇರಲಿ, ಹೇಗೇ ಇರಲಿ,
ಬದುಕಬೇಕು ನಾವು ಸಾವೇ ಇಲ್ಲದವರಂತೆ
ಸಾವು ತಟ್ಟದವರಂತೆ..
(೧೯೪೮)

(ಕನ್ನಡಕ್ಕೆ: ಅನುಪಮಾ, ಕವಲಕ್ಕಿ.)

(ನಜೀಂ ಹಿಕ್ಮತ್ (೧೯೦೨-೧೯೬೩) ಟರ್ಕಿಯ ಕವಿ, ನಾಟಕಕಾರ, ನಿರ್ದೇಶಕ. ತಮ್ಮ ರಾಜಕೀಯ ನಿಲುವುಗಳ ಹಾಗೂ ಕಮ್ಯುನಿಸ್ಟ್ ಸಿದ್ಧಾಂತದ ಮೇಲಿದ್ದ ಒಲವಿನ ಕಾರಣವಾಗಿ ಪದೇಪದೇ ಬಂಧನಕ್ಕೊಳಗಾಗಿ ಅಥವಾ ದೇಶಭ್ರಷ್ಟನಾಗಿ ಆತ ತನ್ನ ಜೀವನದ ಬಹುಕಾಲ ಕಳೆಯಬೇಕಾಯಿತು. ೧೯೩೮ರಲ್ಲಿ ನೌಕಾಸೇನೆಯ ನಾವಿಕರು ನಜೀಂ ಕವಿತೆ ಓದಿದಾಗ ಅದು ಮಿಲಿಟರಿ ಕ್ಷಿಪ್ರಕ್ರಾಂತಿಗೆ ಕವಿ ಕೊಡುತ್ತಿರುವ ಕುಮ್ಮಕ್ಕು ಎಂದು ಭಾವಿಸಿ ಬಂಧಿಸಲಾಯಿತು. ೨೮ ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ೧೯೫೦ರಲ್ಲಿ ಶಾಂತಿ ಪ್ರಶಸ್ತಿ ಬಂದಾಗ ಅವರ ಬಿಡುಗಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಯಿತು. ಜೈಲಿನಲ್ಲೇ ಅವರು ಎರಡು ಬಾರಿ (೧೫ ದಿನ ಮತ್ತು ೧೭ ದಿನ) ತಮ್ಮ ಬಿಡುಗಡೆಗೆ ಉಪವಾಸ ಸತ್ಯಾಗ್ರಹ ಮಾಡಿದರು. ಕೊನೆಗಂತೂ ಅವರ ಬಿಡುಗಡೆಯಾದ ನಂತರ ತಮ್ಮ ಸಾವಿನವರೆಗೂ ಸೋವಿಯತ್ ಯೂನಿಯನ್‌ನಲ್ಲಿದ್ದರು. ಆತನ ಹೆಸರನ್ನೂ ಟರ್ಕಿಯಲ್ಲಿ ನಿಷೇಧಿಸಲಾಗಿತ್ತು. ೨೦೦೧ರಲ್ಲಿ ಕವಿಯ ಜನ್ಮ ಶತಮಾನೋತ್ಸವದ ವೇಳೆ ಮೂಲಭೂತವಾದಿಗಳ ವಿರೋಧದ ನಡುವೆಯೂ ಅವರಿಗೆ ಮರಳಿ ಟರ್ಕಿಯ ಪೌರತ್ವ ಘೋಷಿಸಬೇಕೆಂದು ಐದು ಲಕ್ಷ ಮಂದಿ ಸಹಿ ಅಭಿಯಾನದಲ್ಲಿ ಪಾಲ್ಗೊಂಡರು. ಇತ್ತೀಚೆಗಷ್ಟೆ ಅವರ ಕವಿತೆಗಳ ಮೇಲಿನ ನಿಷೇಧ ತೆರವುಗೊಂಡು ಲಭ್ಯವಾಗಿವೆ.)

Sunday 22 November 2015

ಟಿಪ್ಪು: ಚರಿತ್ರೆಯ ಕಾಲದ ನಾಣ್ಯ







ಬಡತನ, ನಿರುದ್ಯೋಗ, ಅನಕ್ಷರತೆ ಮುಂತಾದ ಸಕಲೆಂಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಜೊತೆಗೆ ಅಭದ್ರತೆ, ತಳಮಳ ಎದುರಿಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಸರ್ಕಾರ ಮಾಡಬೇಕಾದ್ದು ಬೇಕಾದಷ್ಟಿತ್ತು. ಮುಸ್ಲಿಂ ಸಮುದಾಯದ ಸಮಗ್ರ ಅಧ್ಯಯನ ನಡೆಸಿ ಸಾಚಾರ್ ಸಮಿತಿ ನೀಡಿದ ವರದಿಯನ್ನು ದಕ್ಷವಾಗಿ ಅನುಷ್ಠಾನಗೊಳಿಸಿದ್ದರೂ ಆ ಸಮುದಾಯದ ಸ್ಥಿತಿ ಉತ್ತಮಗೊಳ್ಳಬಹುದಿತ್ತು. ಆದರೆ ಜಾತಿಗೊಂದು ಜಯಂತಿ ನಿಗದಿಪಡಿಸಿ ಆ ಸಮುದಾಯವನ್ನೇ ಉದ್ಧಾರ ಮಾಡಿದೆವೆಂದು ಬೀಗುವ ಆಳುವವರಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವಂತಿರಲಿಲ್ಲ. ಇದುವರೆಗೆ ಕೆಲ ಸಂಘಸಂಸ್ಥೆಗಳು ಆಚರಿಸಿಕೊಂಡು ಬರುತ್ತಿದ್ದ ಟಿಪ್ಪು ಜಯಂತಿಯನ್ನು ಈ ಸಲದಿಂದ ಸರ್ಕಾರವೇ ಆಚರಿಸಲು ತೀರ್ಮಾನಿಸಿತು. ಮತ್ತಿನ್ನಾವ ಜಯಂತಿ, ಪುಣ್ಯತಿಥಿಗಳಲ್ಲೂ ಹೀಗಾಗಿರಲಿಲ್ಲ, ಟಿಪ್ಪು ಜಯಂತಿಯ ಆಸುಪಾಸು ಸಂಪೂರ್ಣ ವಿರುದ್ಧ ಕ್ರಿಯೆ, ಪ್ರತಿಕ್ರಿಯೆಗಳನ್ನು ಈ ನಾಡು ಕಂಡಿತು. ಮೈಸೂರು ಆಳಿದ ಅರಸನ ಆರಾಧನೆ, ನಿಂದನೆ ಎರಡೂ ನಡೆದವು. ಒಂದು ವರ್ಗವು ಟಿಪ್ಪುವನ್ನು ಅನನ್ಯ ದೇಶಪ್ರೇಮಿ, ಸೆಕ್ಯುಲರ್ ರಾಜ, ಜಮೀನ್ದಾರಿ ಪದ್ಧತಿ ಕೊನೆಗೊಳಿಸಲೆತ್ನಿಸಿದ ಕ್ರಾಂತಿಕಾರಿ ಸುಲ್ತಾನ, ಶ್ರಿಂಗೇರಿ-ನಂಜನಗೂಡು-ಮೇಲುಕೋಟೆ ಮುಂತಾದ ದೇವಾಲಯಗಳಿಗೆ ದತ್ತಿಕಾಣಿಕೆ ನೀಡಿದ ಸಹಿಷ್ಣುವೆಂದು ಬಿಂಬಿಸಿದರೆ; ಮತ್ತೊಂದು ವರ್ಗವು ಅವನು ಸೋತ ಪ್ರದೇಶಗಳಲ್ಲಿ ಮಾಡಿದ ಲೂಟಿ ಮತ್ತು ನಾಶವನ್ನು ನೆನಪಿಸಿಕೊಂಡು ಕಾಫಿರರನ್ನು ಸೋಲಿಸಿ ಹಿಂಸಿಸಿ ಇಸ್ಲಾಂ ಸಾಮ್ರಾಜ್ಯ ಕಟ್ಟಹೊರಟ ಮತಾಂಧ ಎಂದು ಜರೆಯಿತು.

ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಇರುವಂಥವೇ ಎಂದಿಟ್ಟುಕೊಂಡು ವಿರುದ್ಧ ಪ್ರತಿಕ್ರಿಯೆಗಳನ್ನು ಅತ್ತ ಸರಿಸುವಂತಿಲ್ಲ. ಧಾರ್ಮಿಕ ಅಸಹನೆ ಉತ್ತುಂಗ ಮುಟ್ಟಿರುವ ೨೦೧೫ರಲ್ಲಿ ಕನ್ನಡಿಗ ಮುಸ್ಲಿಮರಿಗೆ ಟಿಪ್ಪು ಸುಲ್ತಾನ್ ಮಾದರಿ ನಾಯಕನ ಗುಣಗಳ ಹೊಂದಿದ್ದನೆ? ವಸಾಹತುಶಾಹಿ ಕಾಲದ ರಾಜನಿಗೆ ಪ್ರಜಾಪ್ರಭುತ್ವ ಭಾರತಕ್ಕೆ ಮಾದರಿಯಾಗುವ ಸೆಕ್ಯುಲರ್ ಲಕ್ಷಣಗಳಿದ್ದವೆ? ಮುಸ್ಲಿಂ ಸಮುದಾಯದ ಬದುಕು ಸುಧಾರಿಸುವುದು ಆಳುವವರ ಇಂಥ ನಡೆಗಳಿಂದಲೇ? ಎಂದು ವಸ್ತುನಿಷ್ಠವಾಗಿ ನೋಡಬೇಕಾದ ಅವಶ್ಯಕತೆಯಿದೆ. ಏಕೆಂದರೆ ಕಾಲದ ನಡಿಗೆಯ ಯಾವುದೇ ಒಂದು ಬಿಂದುವಿನಲ್ಲಿ ಇಟ್ಟ ಹೆಜ್ಜೆ ಮತ್ತು ಆಯ್ಕೆ ತಪ್ಪಾದರೆ ಅದರ ಜವಾಬ್ದಾರಿಗಳನ್ನು ಆ ಕಾಲದ ಎಲ್ಲರೂ ಸಮವಾಗಿ ಹೊತ್ತುಕೊಳ್ಳಬೇಕಾಗುತ್ತದೆ.


ಟಿಪ್ಪು ಚರಿತ್ರೆಕಾಲದ ಒಂದು ನಾಣ್ಯ. ಈ ಮಾತು ಟಿಪ್ಪುವಿಗಷ್ಟೆ ಅಲ್ಲ, ಬಹುಪಾಲು ಚಾರಿತ್ರಿಕ ವ್ಯಕ್ತಿಗಳಿಗೆ, ಅದರಲ್ಲೂ ರಾಜರಿಗೆ ಅನ್ವಯಿಸುತ್ತದೆ. ಆ ನಾಣ್ಯಗಳಿಗೆ ಎರಡು ಭಿನ್ನ ಮುಖಗಳಿರುತ್ತವೆ. ಎರಡು ಮುಖಗಳನ್ನು ಆ ಕಾಲದ ಅಗತ್ಯವು ರೂಪುಗೊಳಿಸಿರುತ್ತದೆ. ಚರಿತ್ರೆ ಕಾಲದ ನೀತಿಕೋಶವೇ ಬೇರೆ. ನ್ಯಾಯ, ನೀತಿ ಎಂಬ ಪದಗಳ ಅರ್ಥವೇ ಬೇರೆ. ಅವನ್ನು ಇವತ್ತು ಎಳೆತರುವುದು, ಹೋಲಿಸುವುದು ಸಾಧುವಲ್ಲ. ಕೊನೆಗೂ ಚರಿತ್ರೆಯೆಂದರೆ ಏನೆಂದು ನಿರ್ಣಯವಾಗಬೇಕಾದ್ದು ಆಕರಗಳಿಂದ ಮಾತ್ರವಲ್ಲ, ನ್ಯಾಯಸೂಕ್ಷ್ಮದ ಮನಸುಗಳಲ್ಲೇ ಎಂದು ನೆನಪಿಸಿಕೊಳ್ಳುತ್ತ ಟಿಪ್ಪು ಸುಲ್ತಾನನ ಎರಡು ಭಿನ್ನ ವ್ಯಕ್ತಿತ್ವಗಳನ್ನು ಪೂರ್ವಗ್ರಹಗಳನಿಟ್ಟುಕೊಳ್ಳದ ಚರಿತ್ರೆಯ ಆಕರಗಳಿಂದ ಇಲ್ಲಿಡಲಾಗಿದೆ.


ನಾಣ್ಯ ಒಂದು: ಯುದ್ಧ-ಆಡಳಿತ

ಟಿಪ್ಪು ಮೈಸೂರಿನ ಆಳರಸರಲ್ಲಿ ಒಬ್ಬ. ಕ್ರಿ. ಶ. ೧೭೫೦, ನವೆಂಬರ್ ೨೦ರಂದು ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ಹುಟ್ಟಿದ. ಕೇವಲ ೪೯ ವರ್ಷ ಬದುಕಿದ ಅವನ ಶೌರ್ಯ, ಬಲಿದಾನ, ಸ್ವಾಭಿಮಾನ ಕುರಿತು ಕತೆಗಳೇ ಇವೆ. ಯುದ್ಧದ ನಾನಾ ಕಲೆಗಳಲ್ಲಿ ನಿಷ್ಣಾತರಾದ ಕುಟುಂಬದಿಂದ ಬಂದವ ಟಿಪ್ಪು. ಅಸಮರ್ಥ ಹಾಗೂ ಅದಕ್ಷ ಮೈಸೂರರಸನನ್ನು ಸಿಂಹಾಸನದಿಂದ ಕೆಳಗಿಳಿಸಿ, ತಾನು ಪ್ರವಾದಿ ಮಹಮದರ ಕುರೇಶಿ ಪಂಗಡದವನೆಂದು ಸಾರಿ ರಾಜನಾದ ಹೈದರಾಲಿಯ ಮಗ. ಟಿಪ್ಪುವಿನ ಅಜ್ಜ ಆರ್ಕಾಟ್ ನವಾಬನ ಸೇನೆಯಲ್ಲಿ ರಾಕೆಟ್ ಪಡೆಯ ಮುಖ್ಯಸ್ಥನಾಗಿದ್ದ. ಕಡಪಾ ಕೋಟೆಯ ಕಾವಲಿನ ಮುಖ್ಯಸ್ಥನ ಮಗಳು ಟಿಪ್ಪುವಿನ ಅಮ್ಮ. ಇಂಥ ವಾತಾವರಣದಲ್ಲಿ ಬೆಳೆದ ಟಿಪ್ಪುವಿಗೆ ಆಡಳಿತ, ಯುದ್ಧ, ವ್ಯೂಹ, ತಂತ್ರಗಾರಿಕೆ ಎಲ್ಲವೂ ಬಹು ಸಹಜವಾಗಿ ನೀರು ಕುಡಿದಂತೆ ಸಿದ್ಧಿಸಿತ್ತು.

ಅನಕ್ಷರಸ್ಥನಾಗಿದ್ದ ಹೈದರಾಲಿ ಮಗ ಟಿಪ್ಪುವಿಗೆ ಸಣ್ಣಂದಿನಿಂದಲೇ ಸಕಲ ವಿದ್ಯೆಗಳನ್ನು ಕಲಿಸುವ ವ್ಯವಸ್ಥೆ ಮಾಡಿದ. ಉರ್ದು, ಪರ್ಷಿಯನ್, ಕನ್ನಡ, ಅರೇಬಿಕ್, ಕುರಾನ್, ಇಸ್ಲಾಮೀ ನ್ಯಾಯಶಾಸ್ತ್ರ, ಕುದುರೆ ಸವಾರಿ, ತೋಪು ಚಲಾಯಿಸುವುದು ಮುಂತಾದವುಗಳನ್ನೆಲ್ಲ ಕಲಿಸಲಾಯಿತು. ಹಲವು ಪರಿಣತಿಗಳಲ್ಲಿ ಜ್ಞಾನ ಸಂಪಾದಿಸಿದ ಟಿಪ್ಪು ಹೊಸ ಮೂಲೂದಿ ಇಸ್ಲಾಮಿ ಪಂಚಾಂಗ ದಿನಗಣನೆಯನ್ನು ಚಾಲ್ತಿಗೆ ತಂದ.

ಮೈಸೂರು ತನ್ನ ತಂದೆಯ ಕೈವಶವಾಗುತ್ತಿದ್ದದ್ದನ್ನು ಟಿಪ್ಪು ಹದಿವಯಸ್ಸಿನಲ್ಲಿ ಗಮನಿಸುತ್ತಿದ್ದ. ರಾಜಕಾರಣದ ಒಳಹೊರಗುಗಳ ಅರಿಯುತ್ತ ತಾನೂ ರೂಪುಗೊಂಡ. ಹದಿವಯಸ್ಸಿನಲ್ಲಿಯೇ ಮೊದಲ ಮೈಸೂರು ಯುದ್ಧ, ಆರ್ಕಾಟ್ ಮೇಲಿನ ದಾಳಿಯಲ್ಲಿ ಭಾಗವಹಿಸಿ ಹದಿನೇಳರ ಹೊತ್ತಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಿದ್ದ. ಟಿಪ್ಪುವಿಗೆ ಯುದ್ಧವಿದ್ಯೆ ಹೇಳಿಕೊಟ್ಟವರು ಫ್ರೆಂಚ್ ಕಮ್ಯಾಂಡರುಗಳು. ೧೭೮೨ರಲ್ಲಿ ಎರಡನೆ ಮೈಸೂರು ಯುದ್ಧ ನಡೆಯುತ್ತಿರುವಾಗಲೇ ಕ್ಯಾನ್ಸರಿನಿಂದ ಹೈದರಾಲಿ ತೀರಿಕೊಂಡಾಗ ತಂದೆ ಅರ್ಧಕ್ಕೆ ಬಿಟ್ಟುಹೋದ ಯುದ್ಧ ಗೆದ್ದು ತನಗೆ ಅನುಕೂಲಕರವಾದ ಷರತ್ತು ವಿಧಿಸಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡ. ಹೀಗೆ ೩೨ ವರ್ಷದ ಟಿಪ್ಪು ವಿಶಾಲ ರಾಜ್ಯದ ಅಧಿಪತಿಯಾದ. ಬೆಂಗಳೂರಿನ ಲಾಲ್‌ಬಾಗನ್ನು ಪೂರ್ಣಗೊಳಿಸಿದ. ರಸ್ತೆ, ಕೆರೆಕಟ್ಟೆ, ಅರಮನೆಗಳ ನಿರ್ಮಿಸಿದ. ಮೈಸೂರು ರೇಶಿಮೆ ಉದ್ದಿಮೆಯಾಗಿ ಬೆಳೆಯಲು ಅನುವಾಗುವಂತೆ ಹೊಸ ತೆರನ ಕಂದಾಯ ವ್ಯವಸ್ಥೆ ಜಾರಿಗೆ ತಂದ. ಫಾತುಲ್ ಮುಜಾಹಿದೀನ್ ಎಂಬ ಮಿಲಿಟರಿ ಕೈಪಿಡಿ ಬರೆದ. ಪಾನ ನಿಷೇಧ ಜಾರಿಗೊಳಿಸಿದ.



ಹೈದರಾಲಿ ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿ ಅದರ ಒಂದು ಪಡೆಯನ್ನೇ ಇಟ್ಟಿದ್ದರೆ, ಟಿಪ್ಪು ಕಬ್ಬಿಣದ ಹೊರಕವಚ ಹೊಂದಿದ ‘ಮೈಸೂರು ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿದ. ಮುಂದೆ ಚೂಪಾದ ಬ್ಲೇಡು ಕಟ್ಟಿ, ಕಬ್ಬಿಣದ ಕೇಸುಗಳೊಳಗೆ ಮದ್ದಿನಪುಡಿ ತುಂಬಿದ್ದರಿಂದ ಅವುಗಳ ದೂರಗಾಮಿತ್ವ ಎರಡು ಕಿ.ಮೀ.ನಷ್ಟು ಹೆಚ್ಚಾಯಿತು. ಮೊದಲು ಈ ರಾಕೆಟ್ಟುಗಳನ್ನು ಎದುರುಗೊಂಡಾಗ ಬ್ರಿಟಿಷರ ತಂತ್ರಜ್ಞಾನ ಅದಕಿಂತ ಹಿಂದಿತ್ತು. ಎಂದೇ ಮೊದಲ ಯುದ್ಧಗಳನ್ನು ಟಿಪ್ಪು ಗೆಲ್ಲಲು ಸಾಧ್ಯವಾಯಿತು. ರಾಜ್ಯದ ಗಡಿಗಳನ್ನು ದಕ್ಷಿಣ, ಪಶ್ಚಿಮದತ್ತ ವಿಸ್ತರಿಸಲು ಸುಲಭವಾಯಿತು.

ಆದರೆ..

ಒಂದು ಕಡೆ ರಾಜ್ಯದ ಗಡಿ ವಿಸ್ತಾರಗೊಳ್ಳತೊಡಗಿದ್ದರೆ ಮತ್ತೊಂದು ಕಡೆ ಸಂಕುಚಿತಗೊಳ್ಳತೊಡಗಿತ್ತು. ೧೭೮೬ರ ಹೊತ್ತಿಗೆ ಮರಾಠರಿಗೆ ಮತ್ತು ನಿಜಾಮನ ಸೇನೆಗೆ ಉತ್ತರ ಕರ್ನಾಟಕದ ಬಹುಭಾಗ ಬಿಟ್ಟುಕೊಡಬೇಕಾಯಿತು. ಮರಾಠ ಪೇಶ್ವೆ ಮಾಧವ ರಾಯನ ದಳಪತಿ ನಾನಾ ಫಡ್ನವೀಸನ ಸೇನೆ ಬದಾಮಿ, ಕಿತ್ತೂರು, ಗಜೇಂದ್ರಗಡದವರೆಗೆ ತುಂಗಭದ್ರಾನದಿ ತನಕದ ಪ್ರದೇಶವನ್ನು ಮೈಸೂರಿನಿಂದ ಮರುವಶಪಡಿಸಿಕೊಂಡಿತು. ಅದೋನಿಯು ಹೈದರಾಬಾದ್ ನಿಜಾಮನ ಪಾಲಾಯಿತು. ಮರಾಠರೊಡನೆ ಒಪ್ಪಂದವಾಗಿ ಟಿಪ್ಪುವು ಯುದ್ಧಖರ್ಚು ೪೮ ಲಕ್ಷ ರೂಪಾಯಿ, ವಾರ್ಷಿಕ ಕಪ್ಪ ೧೨ ಲಕ್ಷ ರೂಪಾಯಿ ಕೊಡಬೇಕಾಯಿತು. ಈ ಸೋಲಿನ ಸಿಟ್ಟಿನಿಂದ ಕುದಿಯುತ್ತಿದ್ದ ಟಿಪ್ಪು ಗಮನವನ್ನು ಮಲಬಾರಿನೆಡೆ ಹರಿಸಿದ. ಅತ್ತ ಮಲಬಾರಿಗೆ ದೊಡ್ಡ ಸೇನೆ ಒಯ್ದಾಗ ಇತ್ತ ಬ್ರಿಟಿಷರು ಮಿತ್ರಸೇನೆಯೊಡಗೂಡಿ ಮೂರನೇ ಮೈಸೂರು ಯುದ್ಧ ಕೆದರಿದರು. ಆ ಯುದ್ಧದಲ್ಲಿ ಸೋಲು ಖಚಿತವೆನಿಸತೊಡಗಿದಾಗ ಸೈನ್ಯಕ್ಕೆ ಅನ್ನನೀರು ಪೂರೈಕೆ ಸಿಗದಂತೆ ಮಾಡಿ ಒಪ್ಪಂದಕ್ಕೆ ಬರುವಂತೆ ಮಾಡಿದ. ಮಿತ್ರಸೇನೆಯೊಂದಿಗೆ ಒಪ್ಪಂದವೇನೋ ಆಯಿತು. ಆದರೆ ತನ್ನ ಅರ್ಧ ಪ್ರಾಂತ್ಯ ಬಿಟ್ಟುಕೊಟ್ಟು ೩ ಕೋಟಿ ೩೦ ಲಕ್ಷ ರೂಪಾಯಿ ಯುದ್ಧ ಖರ್ಚನ್ನು ಕೊಡಬೇಕಾಯಿತು. ಅಷ್ಟು ಹಣ ಸಂದಾಯವಾಗುವವರೆಗೆ ತನ್ನಿಬ್ಬರು ಮಕ್ಕಳನ್ನು ಲಾರ್ಡ್ ಕಾರ್ನ್‌ವಾಲೀಸನ ಬಳಿ ಮದರಾಸಿನಲ್ಲಿ ಒತ್ತೆಯಿರಿಸಿ ಎರಡು ಕಂತಿನಲ್ಲಿ ಪೂರ್ತಿ ಹಣ ಕೊಟ್ಟು ಮಕ್ಕಳನ್ನು ಬಿಡಿಸಿ ತರಬೇಕಾಯಿತು.


ಹೆತ್ತವಳ ಒಡಲ ಸಂಕಟವೇನಾಗಿತ್ತೋ, ಸ್ವಂತ ಮಕ್ಕಳ ಒತ್ತೆಯಿಟ್ಟದ್ದು ಅನನ್ಯ ದೇಶಪ್ರೇಮವೆಂದು ಕೊಂಡಾಡಲ್ಪಟ್ಟಿತು.

ಕೊನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆ ಕೋಟೆ ಒಡೆದು ಒಳ ಪ್ರವೇಶಿಸಿದಾಗ ಟಿಪ್ಪುವಿನ ಮಿಲಿಟರಿ ಸಲಹಾಕಾರನಾಗಿದ್ದ ಫ್ರೆಂಚ್ ಅಧಿಕಾರಿ ಸುರಕ್ಷಿತ ಜಾಗಕ್ಕೆ ಓಡಿಹೋಗುವಂತೆ ಅಥವಾ ಶರಣಾಗುವಂತೆ ಟಿಪ್ಪುವಿಗೆ ಹೇಳಿದ. ಆದರೆ ‘ಒಂದು ದಿನ ಹುಲಿಯಂತೆ ಬದುಕುವುದು, ಸಾವಿರವರ್ಷ ಕುರಿಯಂತೆ ಬದುಕಿರುವುದಕ್ಕಿಂತ ಉತ್ತಮವೆಂದು ಟಿಪ್ಪು ಹೋರಾಟವನ್ನೇ ಆಯ್ದುಕೊಂಡ.



ಹುಲಿಯಂತೆ ಬದುಕಬೇಕೆಂದು ತಮ್ಮ ರಾಜ ಬಯಸಿದ್ದಕ್ಕೆ ಮೈಸೂರಿನ ೧೧,೦೦೦ ಸೈನಿಕರು ಪ್ರಾಣ ತೆರಬೇಕಾಯಿತು. ಕಾವೇರಿ ಕೆಂಪಾಗಿ ಹರಿಯಿತು.

ನಾಣ್ಯ ೨: ಸ್ವದೇಶಿ  - ಪರದೇಶಿ





ಯಾವ ಎರಡನೆ ಮೈಸೂರು ಯುದ್ಧದ ಗೆಲುವು ಟಿಪ್ಪುವನ್ನು ರಾಜನನ್ನಾಗಿಸಿತೊ ಅದೇ ಯುದ್ಧವು ಅವನ ಅತಿಗಳ ಕುರಿತೂ ಹೇಳುತ್ತದೆ. ಬ್ರಿಟಿಷರನ್ನೇನೋ ಸೋಲಿಸಲಾಯಿತು, ಆದರೆ ತಂಜಾವೂರನ್ನು ಟಿಪ್ಪುವಿನ ಪಡೆಗಳು ಬುಡಮಟ್ಟ ನಾಶಮಾಡಿದವು. ತಂಜಾವೂರು ಚೇತರಿಸಿಕೊಳ್ಳಲು ಒಂದು ಶತಮಾನ ಹಿಡಿಯಿತು. ದನಕರು, ಬೆಳೆ ನಾಶವಷ್ಟೆ ಅಲ್ಲ, ೧೨,೦೦೦ ಮಕ್ಕಳನ್ನು ಟಿಪ್ಪು ಅಪಹರಿಸಿದ ಎಂಬ ದಾಖಲಾತಿಯೂ ಇದೆ.

ವಸಾಹತುಶಾಹಿ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಹೋರಾಟಗಾರ ಟಿಪ್ಪು. ಆದರೆ ಅವ ಹೋರಾಡಿದ್ದು, ಖ್ಯಾತ ಮೈಸೂರು ರಾಕೆಟ್ಟುಗಳನ್ನು ಬಳಸಿದ್ದು ಕೇವಲ ಬ್ರಿಟಿಷರ ವಿರುದ್ಧ ಮಾತ್ರವಲ್ಲ; ಆಚೀಚಿನ ರಾಜರುಗಳಾದ ಮರಾಠರು, ತಂಜಾವೂರು-ಮಲಬಾರ್-ಶಿರಾ-ಬಿದನೂರು-ಕೊಡಗು-ತಿರುವಾಂಕೂರು ಆಳ್ವಿಕರು, ಅರ್ಕಾಟಿನ ನವಾಬ, ಹೈದರಾಬಾದಿನ ನಿಜಾಮ ಇವರ ವಿರುದ್ಧ. ಕೊನೆಯತನಕ ಟಿಪ್ಪುವಿನ ಕಡುವೈರಿಗಳು ಮರಾಠರು ಮತ್ತು ಹೈದರಾಬಾದಿನ ನಿಜಾಮ.  

ಗತವೈಭವದ ಕನವರಿಕೆಯಲ್ಲಿ ಕೊನೆಯುಸಿರೆಳೆಯುತ್ತಿದ್ದ ಮುಘಲ್ ಸಾಮ್ರಾಜ್ಯದ ದೊರೆ ಶಾ ಅಲಂಗೆ ಟಿಪ್ಪು ತಾನೇತಾನಾಗಿ ಅಧೀನತೆಯನ್ನು ಪ್ರದರ್ಶಿಸುತ್ತಿದ್ದ. ಶಾ ಅಲಂನನ್ನು ಹಿಜ್ರಾ ಒಬ್ಬ ಕುರುಡನನ್ನಾಗಿಸಿ ಪದಚ್ಯುತಗೊಳಿಸಿದ ನಂತರ ಟಿಪ್ಪು ಮರಾಠರನ್ನು ಸೋಲಿಸಲು ಆಫ್ಘನಿಸ್ತಾನದ ದುರಾನಿ ರಾಜರನ್ನು ಸಂಪರ್ಕಿಸಿದ. ಬ್ರಿಟಿಷರ ವಿರುದ್ಧ ಆಕ್ರಮಣಕ್ಕೆ ತುರ್ತು ಸಹಾಯ ಮಾಡುವಂತೆ ಟರ್ಕಿಯ ಒಟ್ಟೊಮನ್ ರಾಜರ ಸಹಾಯ ಕೇಳಿದ. ಆದರೆ ಇವರಿಗೆಲ್ಲ ರಷ್ಯಾದ ವಿರುದ್ಧ ಹೋರಾಡಲು ಬ್ರಿಟಿಷರ ಸಹಾಯ ಬೇಕಿದ್ದರಿಂದ ಟಿಪ್ಪುವಿಗೆ ಸಹಾಯ ಮಾಡಲಾರದೆ ಹೋದರು. ಕೊನೆಗೆ ಬ್ರಿಟಿಷರ ವಿರುದ್ಧ ಫ್ರೆಂಚ್ ಯುದ್ಧವೀರ ನೆಪೋಲಿಯನ್ ಬೋನಪಾರ್ಟೆಯ ಸಹಾಯಕ್ಕಾಗಿ ಪ್ರಯತ್ನಿಸಲಾಯಿತು.

ಈ ಸಂಕೀರ್ಣ ಸಂಬಂಧಗಳಲ್ಲಿ ಯಾರು ಸ್ವದೇಶಿ, ಯಾರು ಪರದೇಶಿ? ಅವೆಲ್ಲ ದೇಶಕಾಲಗಳಷ್ಟೇ ನಿರ್ಧರಿಸಬೇಕಾದ ಸಂಗತಿ.



ನಮ್ಮೂರು ಉತ್ತರಕನ್ನಡದ ಹೊನ್ನಾವರ ಕುರಿತು ವಸಾಹತುಶಾಹಿಗಳಿಗೆ, ಆದಿಲ್ ಶಾಹಿಗಳಿಗೆ, ಆಚೀಚಿನ ಪಾಳೆಯಪಟ್ಟುಗಳಿಗೆ, ಮೈಸೂರರಸರಿಗೆ ಬಹಳ ಆಕರ್ಷಣೆ. ಏಕೆಂದರೆ ಅದು ೨೦೦-೩೦೦ ಟನ್ ತೂಕದ ಹಡಗುಗಳನ್ನು ನಿಲ್ಲಿಸಬಲ್ಲ ಪ್ರಾಕೃತಿಕ ಬಂದರಾಗಿತ್ತು. ೧೭೬೩ರಲ್ಲಿ ಬಿದನೂರನ್ನು ತನ್ನ ಆಡಳಿತ ಕೇಂದ್ರವಾಗಿ ಮಾಡಿಕೊಂಡ ಹೈದರಾಲಿ ಹೊನ್ನಾವರ ಮತ್ತು ಮಂಗಳೂರಿನಲ್ಲಿ ನೌಕಾಸೈನ್ಯ ಇಟ್ಟ. ೧೭೬೯ರಲ್ಲಿ ಬ್ರಿಟಿಷ್ ಪಡೆ ಅವನ ವಿರುದ್ಧ ದಂಡೆತ್ತಿ ಬಂದಾಗ ಹೈದರಾಲಿಯ ಅಶ್ವದಳ ಅವನಿಗೇ ತಿರುಗಿ ಬಿದ್ದು ಹೊನ್ನಾವರ ಕೈತಪ್ಪಿ ಹೋಯಿತು. ಅದನ್ನು ಮತ್ತೆ ಹೈದರಾಲಿ ವಶಪಡಿಸಿಕೊಂಡ. ಆದರೆ ೧೭೮೪ರಲ್ಲಿ ಕ್ಯಾಪ್ಟನ್ ಟೋರಿಯಾನೋ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ಮೂರು ತಿಂಗಳ ಕಾಲ ಹೊನ್ನಾವರ ಬಂದರವನ್ನು ತನ್ನ ವಶದಲ್ಲಿ ಇಟ್ಟುಕೊಂಡಾಗ ಅವನಿಂದ ಹೊನ್ನಾವರವನ್ನು ಗೆದ್ದ ಟಿಪ್ಪು ಶಹರವನ್ನು ಸಂಪೂರ್ಣ ನಾಶಮಾಡಿದ. ಮೊದಲು ವ್ಯಾಪಾರೀ ಕೇಂದ್ರವಾಗಿ ಜನರಿಂದ ಗಿಜಿಗಿಜಿಗುಡುತ್ತಿದ್ದ ಬಂದರವು ಸುಟ್ಟು, ನಿರ್ಜನ ಸುಡುಗಾಡಿನಂತಾಯಿತು. ೧೭೯೯ರಲ್ಲಿ ಅವನ ಮರಣಾನಂತರ ಐದು ಅಂಗಡಿಗಳು ಹೊನ್ನಾವರದಲ್ಲಿ ತೆರೆಯಲ್ಪಟ್ಟವು. ೧೮೦೦ರಲ್ಲಿ ಒಂದೇಒಂದು ವಾಸದ ಮನೆಯೂ ಇಲ್ಲಿರಲಿಲ್ಲ. ೧೮೦೧ರಲ್ಲಿ ಬಂದಿದ್ದ ಪ್ರವಾಸಿ ಬುಕಾನನ್ ಅಲ್ಲಿಲ್ಲಿ ಅಡಗಿಕೊಂಡಿದ್ದ ವ್ಯಾಪಾರಿಗಳೆಲ್ಲ ಈಗ ಒಬ್ಬೊಬ್ಬರಾಗಿ ಹಿಂದಿರುಗಿ ಬರುತ್ತಿದ್ದಾರೆಂದು ಬರೆದ.

ತನ್ನ ರಾಜ್ಯದ ಗಡಿಯಾಚೆ ಇರುವ, ಬೇರೆ ಭಾಷೆ ಆಡುವ, ಬೇರೆ ದಿರಿಸು ತೊಡುವ, ತನ್ನ ದೇವರನ್ನು ನಂಬದ ಎಲ್ಲರೂ ಶತ್ರು/ಅನ್ಯ ಎಂಬ ಭಾವವೇ ರಾಷ್ಟ್ರೀಯತೆಯಾಗಿದ್ದ ಕಾಲದಲ್ಲಿ ಯಾವುದು ದೇಶಭಕ್ತಿ, ಯಾವುದು ದೇಶದ್ರೋಹ? ಅದನ್ನು ಈ ಕಾಲದಲ್ಲಿ ನಿರ್ಧರಿಸಬಹುದೆ?

ನಾಣ್ಯ ೩: ಧರ್ಮಾಂಧ - ಧರ್ಮ ಸಹಿಷ್ಣು

ಟಿಪ್ಪು ಹಿಂದೂ ಬಹುಸಂಖ್ಯಾತರ ಪ್ರದೇಶವನ್ನು ಆಳುತ್ತಿದ್ದ ಮುಸ್ಲಿಂ ರಾಜ. ಆಸ್ಥಾನದ ಮುಖ್ಯ ಸ್ಥಾನಗಳಲ್ಲಿ ಹಿಂದೂಗಳನ್ನು, ಅದರಲ್ಲೂ ಬ್ರಾಹ್ಮಣರನ್ನು ನೇಮಿಸಿಕೊಂಡಿದ್ದ. ಆತ ‘ಬ್ರಾಹ್ಮಣರ ಕುರಿತು ದ್ವೇಷವಿಲ್ಲದ ದೊರೆ ಎಂದು ಬಣ್ಣಿಸಲ್ಪಟ್ಟ. ಅದು ಹೈದರಾಲಿಯ ರಾಜನೀತಿಯಾಗಿತ್ತು. ದಿವಾನ್ ಪೂರ್ಣಯ್ಯನಿಂದ ಹಿಡಿದು ಖಜಾಂಚಿಯವರೆಗೆ ಬಹಳ ಜಾಗಗಳಲ್ಲಿ ಮುಸ್ಲಿಮೇತರರು ಆಸ್ಥಾನದ ಸೇವೆಯಲ್ಲಿದ್ದರು. ೧೫೬ ದೇವಾಲಯಗಳಿಗೆ ನಿಯಮಿತ ವಾರ್ಷಿಕ ದತ್ತಿ ನೀಡುತ್ತಿದ್ದ. ಎಷ್ಟೋ ದೇವಾಲಯಗಳಿಗೆ ಖಾಯಂ ಉತ್ಪನ್ನದ ಮಾರ್ಗವಾಗಿ ಭೂಮಿ ಉಂಬಳಿ ನೀಡಿದ. ನಂಜನಗೂಡು, ಮೇಲುಕೋಟೆ, ಶ್ರೀರಂಗಪಟ್ಟಣದ ದೇವಾಲಯಗಳೂ ಸೇರಿದಂತೆ ಹಲವು ದೇವಾಲಯಗಳಿಗೆ ಚಿನ್ನ ಬೆಳ್ಳಿ ಉಡುಗೊರೆ ನೀಡಿದ. ೧೭೯೧ರಲ್ಲಿ ಮರಾಠರು ಶ್ರಿಂಗೇರಿ ಮಠ ಮತ್ತು ದೇವಾಲಯದ ಮೇಲೆ ದಾಳಿ ಮಾಡಿ, ಹಲವರನ್ನು ಕೊಂದು, ಲೂಟಿ ಮಾಡಿದಾಗ ಮಠದ ಸ್ವಾಮಿಗಳು ಸಹಾಯ ಕೋರಿ ಟಿಪ್ಪುವಿನೊಡನೆ ಪತ್ರ ವ್ಯವಹಾರ ನಡೆಸಿದರು. ಟಿಪ್ಪು ರಕ್ಷಣೆ ನೀಡಿ ವಸ್ತುಗಳನ್ನು ದೇಣಿಗೆಯಾಗಿ ನೀಡಿದ. ಶ್ರೀರಂಗಪಟ್ಟಣದಲ್ಲಿ ಅವನ ಅರಮನೆಯ ಸನಿಹವೇ ಇದ್ದ ರಂಗನಾಥ ಮಂದಿರದ ಪೂಜಾಧ್ವನಿಯೂ, ಮಸೀದಿಯ ಕರೆಯೂ ಒಟ್ಟೊಟ್ಟು ಕೇಳಿಬರುತ್ತಿದ್ದವು.

ಈ ವಿವರಗಳು ತನ್ನ ರಾಜ್ಯದಲ್ಲಿ ಅವ ಧರ್ಮಸಹಿಷ್ಣುವಾಗಿದ್ದ ಎಂದು ತಿಳಿಸುತ್ತವೆ.

ಆದರೆ ಅವನೇ ಹೇಳಿಕೊಂಡಂತೆ ಆತ ಇಸ್ಲಾಮಿನಲ್ಲಿ ಗಾಢ ನಂಬಿಕೆಯಿಟ್ಟು ಅಲ್ಲಾಹುವಿನ ರಾಜ್ಯ ತರಬಯಸಿದ್ದ ಘಾಜಿ. ರಾಜ್ಯದೆಲ್ಲೆಡೆ ಸಾಧ್ಯವಾದಷ್ಟು ಮಸೀದಿ ನಿರ್ಮಾಣ ಮಾಡಿದ. ತಾನು ಗೆದ್ದ ಪ್ರದೇಶಗಳ ಕಾಫಿರರನ್ನು ಕೊಂದ ಬಗ್ಗೆ, ಅವರನ್ನು ‘ಮತಾಂತರದ ಗೌರವಕ್ಕೊಳಪಡಿಸಿದ್ದರ ಬಗೆಗೆ ಹಲವು ಪತ್ರಗಳಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಮುಘಲ್ ಸಾಮ್ರಾಜ್ಯ ಅವನತಿ ಕಾಣುವ ಹೊತ್ತಿಗೆ ಉಚ್ಛ್ರಾಯ ಸ್ಥಿತಿಗೆ ಬಂದ ಟಿಪ್ಪು ಒಂದು ವಿಶಾಲ ಮುಸ್ಲಿಂ ಸಾಮ್ರಾಜ್ಯ ಕಟ್ಟುವ ಕನಸು ಹೊಂದಿ ಬಾದಶಾಹ್ ಎಂದು ತನ್ನನ್ನೇ ತಾನು ಕರೆದುಕೊಂಡ. ಮಾರ‍್ಕ್ವೆಸ್ ಆಫ್ ವೆಲ್ಲೆಸ್ಲಿಗೆ ಆತ ಉಡುಗೊರೆ ನೀಡಿದ ಕತ್ತಿಯ ಮೇಲೆ ಅಲ್ಲಾನ ರಾಜ್ಯ ಸ್ಥಾಪನೆಗೆ ತನ್ನ ಪ್ರಯತ್ನಗಳನ್ನು ಉತ್ಪ್ರೇಕ್ಷೆಯಿಂದ ವರ್ಣಿಸಿದ್ದಾನೆ. ಶ್ರೀರಂಗಪಟ್ಟಣ ಅರಮನೆಯ ಆವರಣದ ಒಂದು ಬಂಡೆಯ ಮೇಲೆ ‘ಕಾಫಿರರು ನಾಶವಾಗಲಿ, ಅವರ ಆಯಸ್ಸು ಕಡಿಮೆಯಾಗಲಿ, ಕುರುಡಾಗಲಿ, ಅವಮಾನಗೊಂಡು ಮುಖ ಕರಿ ಆಗಲಿ.. ಇತ್ಯಾದಿ ಕೆತ್ತಲಾಗಿದೆ.


೧೭೮೪ರಲ್ಲಿ ಮಂಗಳೂರು ಒಪ್ಪಂದವಾದದ್ದೇ ಅಲ್ಲಿದ್ದ ಕ್ಯಾಥೊಲಿಕ್ ಕ್ರೈಸ್ತರನ್ನು ಶ್ರೀರಂಗಪಟ್ಟಣಕ್ಕೆ ಗಡೀಪಾರು ಮಾಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡ. ಥಾಮಸ್ ಮನ್ರೋ (ಮಂಗಳೂರು ಕಲೆಕ್ಟರ್) ಪ್ರಕಾರ ೬೦,೦೦೦ ಕ್ರೈಸ್ತರು ಬಂಧಿತರಾಗಿ ಶ್ರೀರಂಗಪಟ್ಟಣಕ್ಕೆ ಕಳಿಸಲ್ಪಟ್ಟರು. ೭೦೦೦ ಜನ ಪಾರಾದರು. ಆರು ವಾರ ಕಾಲ್ನಡಿಗೆಯಲ್ಲಿ ಘಟ್ಟ ಹತ್ತಿ ಶ್ರೀರಂಗಪಟ್ಟಣಕ್ಕೆ ಹೋದ ಬಂಧಿತರು ಅವನ ಸಾವಿನವರೆಗೂ ೧೫ ವರ್ಷ ಕಾಲ ಬಂಧಿತರಾಗಿಯೇ ಇದ್ದರು. ಬಂಧಿತರಲ್ಲಿ ಒಬ್ಬನಾಗಿದ್ದ ಬ್ರಿಟಿಷ್ ಅಧಿಕಾರಿ ಜೇಮ್ಸ್ ಸ್ಕರಿ ಪ್ರಕಾರ ೩೦,೦೦೦ ಜನರನ್ನು ಇಸ್ಲಾಮಿಗೆ ಮತಾಂತರಿಸಲಾಯ್ತು. (ಗೆಜೆಟಿಯರ್ ಪ್ರಕಾರ ೩೦,೦೦೦ ಜನರಿಗೆ ಬಲವಂತವಾಗಿ ಸುನ್ನತಿ ನಡೆಸಿ ಮೈಸೂರಿಗೆ ಕಳಿಸಲಾಯಿತು.) ಹೊತ್ತುತಂದ ಹೆಂಗಸರು, ಸಣ್ಣ ಹೆಣ್ಮಕ್ಕಳನ್ನು ಅವನ ಸೈನ್ಯದವರು ‘ಇಟ್ಟುಕೊಂಡರು ಅಥವಾ ಮದುವೆ ಮಾಡಿಕೊಂಡರು. ಪ್ರತಿರೋಧ ತೋರಿದವರ ಮೂಗು, ಕಿವಿ, ಮೇಲ್ದುಟಿ ಕತ್ತರಿಸಲಾಯಿತು. ಫಾದರ್ ಮಿರಾಂಡಾ ಸೇರಿದಂತೆ ೨೧ ಜನ ಪಾದ್ರಿಗಳನ್ನು ವಾಪಸು ಬಂದರೆ ನೇಣಿಗೇರಿಸುವುದಾಗಿ ಹೇಳಿ, ೨ ಲಕ್ಷ ರೂ. ದಂಡ ವಿಧಿಸಿ ಗೋವಾಕ್ಕೆ ಗಡೀಪಾರು ಮಾಡಲಾಯಿತು. ಮಂಗಳೂರಿನ ೨೭ ಚರ್ಚುಗಳನ್ನು ನೆಲಸಮ ಮಾಡಲಾಯಿತು. ಸ್ಕರಿ ನಂತರ ನೆನಪಿಸಿಕೊಳ್ಳುವಂತೆ ಬ್ರಿಟಿಷ್ ಸೈನಿಕರ ಮೇಲೆ ಅವನ ಸೇಡು ವಿಶೇಷವಾಗಿರುತ್ತಿತ್ತು. ಬಲವಂತದ ಸುನ್ನತಿಗೊಳಪಡಿಸಲಾಗುತ್ತಿತ್ತು. ಅವರು ಹೆಂಗಸರಂತೆ ಚೋಲಿ ಧರಿಸಿ ಆಸ್ಥಾನದಲ್ಲಿ ನರ್ತನ ಮಾಡಬೇಕಿತ್ತು. ಅವನು ಬಿಡುಗಡೆಯಾದಾಗ ಕುರ್ಚಿ ಮೇಲೆ ಕೂರುವುದು, ನೈಫ್ ಪೋರ‍್ಕ್ ಬಳಸುವುದನ್ನೇ ಮರೆತುಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದಾನೆ.

ಮಲಬಾರಿನ, ತಂಜಾವೂರಿನವರ, ಕೊಡಗಿನವರ ಸಾಂಸ್ಕೃತಿಕ ನೆನಪುಗಳಲ್ಲಿ ಟಿಪ್ಪುವಿನ ಕೆಲವು ಉದಾತ್ತ ನಡವಳಿಕೆಗಳ ಉಲ್ಲೇಖವಿದ್ದರೂ, ಅವನ ಕ್ರೌರ್ಯದ ಕತೆಗಳ ಸಂಖ್ಯೆ ದೊಡ್ಡದಿದೆ. ೧೭೬೩ರಲ್ಲಿ ಹೈದರಾಲಿ ಮೊದಲ ಬಾರಿಗೆ ಮಲಬಾರನ್ನು ಆಕ್ರಮಿಸಿದಾಗ ಸಣ್ಣಪುಟ್ಟ ದೊರೆಗಳು ತಿರುವಾಂಕೂರಿಗೆ ಓಡಿಹೋದರು. ಕಲ್ಲಿಕೋಟೆಯ ಜಾಮೊರಿನ್ ದೊರೆ ತನ್ನ ಅರಮನೆಗೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆ ಮಾಡಿಕೊಂಡ. ನಾಯರ್ ಸಮುದಾಯವು ಟಿಪ್ಪುವಿನ ಯುದ್ಧ-ತಂತ್ರಗಳಲ್ಲಿ ಇನ್ನಿಲ್ಲದ ಹೊಡೆತ ತಿಂದಿತು. ಇತಿಹಾಸಕಾರರ ಪ್ರಕಾರ ಕೇರಳದ ಎಲ್ಲ ಸೈನಿಕರು ಹೆಚ್ಚುಕಮ್ಮಿ ನಾಯರ್ ಸಮುದಾಯದವರು. ಅವರ ಜನಸಂಖ್ಯೆ ಅಂದಿನ ಕೇರಳದ ಜನಸಂಖ್ಯೆಯ ಐದನೇ ಒಂದು ಭಾಗ. ಮಲಬಾರನ್ನು ಮೈಸೂರಿನ ಸೇನೆ ಸುತ್ತುವರೆದಾಗ ಆರು ರಾಜವಂಶಗಳು ಮತ್ತು ಬಹಳಷ್ಟು ನಾಯರ್ ಕುಟುಂಬಗಳು ತಿರುವಾಂಕೂರಿನ ‘ಧರ್ಮರಾಜನ ಆಶ್ರಯಕ್ಕೆ ಓಡಿಹೋದವು. ಧರ್ಮರಾಜನ ಪ್ರಬಲ ಕೋಟೆ ತಮ್ಮನ್ನು ಕಾಪಾಡೀತೆಂಬ ನಂಬಿಕೆ ಅವರದು. ಆದರೆ ೧೭೮೯ರ ಯುದ್ಧದಲ್ಲಿ ಆ ಕೋಟೆ ನುಚ್ಚುನೂರಾದಾಗ ಬಹಳಷ್ಟು ನಾಯರ್‌ಗಳು ಕಾಡಿಗೆ ಓಡಿಹೋದರು. ಕೆಲವರು ಸೈನಿಕರ ಕೈಗೆ ಸಿಕ್ಕು ಇಸ್ಲಾಮಿಗೆ ಮತಾಂತರಗೊಂಡರು. ಭೂಮಿ, ಶಸ್ತ್ರಾಸ್ತ್ರ, ಹಕ್ಕು ಕಳೆದುಕೊಂಡ ಕಾಡುಪಾಲಾದ ನಾಯರ್‌ಗಳು ಸುಮ್ಮನಿರಲಿಲ್ಲ. ಪದೇಪದೇ ಒಗ್ಗೂಡಿ ದಾಳಿ ನಡೆಸುತ್ತಿದ್ದರು. ಇದನ್ನು ಕೆ. ಎಂ. ಫಣಿಕ್ಕರ್ ಸ್ವಾತಂತ್ರ್ಯ ಹೋರಾಟ ಎಂದು ಕರೆಯುತ್ತಾರೆ. ಆಗ ಮಲಬಾರಿನಲ್ಲಿದ್ದ ಬಹುವಿವಾಹ ಮತ್ತು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಟಿಪ್ಪು ನಿರ್ಬಂಧಿಸಿದ. ಒಂದಕ್ಕಿಂತ ಹೆಚ್ಚು ಮದುವೆಯಾದರೆ ಹೆಂಗಸರನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಳಿಸಲಾಗುವುದು ಎಂಬ ಬಹಿರಂಗ ಪ್ರಕಟಣೆ ಕೊಟ್ಟ. ೨೫ ವರ್ಷ ಇದು ಹಾಗೇ ಮುಂದುವರೆಯಿತು. ಬೇಕಲಕೋಟೆಯ ಗವರ್ನರ್ ಬುದ್ರೂಜ್ ಖಾನನಿಗೆ ಬರೆದ ಪತ್ರದಲ್ಲಿ ಟಿಪ್ಪು, ೪ ಲಕ್ಷ ಹಿಂದೂಗಳನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಲಾಗಿದ್ದು ತಿರುವಾಂಕೂರಿನ ರಾಮನ್ ನಾಯರನನ್ನೂ, ಅವನ ಪ್ರಜೆಗಳನ್ನೂ ಮತಾಂತರಗೊಳಿಸುವ ಕನಸೇ ರೋಮಾಂಚಕಾರಿ ಎಂದು ಹೇಳಿಕೊಂಡಿದ್ದಾನೆ.

ಆದರೆ ಟಿಪ್ಪುವಷ್ಟೇ ಅಲ್ಲ, ಆ ಕಾಲದ ಎಲ್ಲ ರಾಜರೂ ತಂತಮ್ಮ ಧರ್ಮ ರಕ್ಷಿಸುವ. ಧರ್ಮ ಕಾರ್ಯಗಳ ಉತ್ಪ್ರೇಕ್ಷಿಸಿ ಹೇಳುವ ಪರಿಪಾಠ ಇಟ್ಟುಕೊಂಡಿದ್ದರು. ಟಿಪ್ಪುವಿನಿಂದ ತಮ್ಮನ್ನು ಕಾಪಾಡುವನೆಂದು ಜನ ನಂಬಿದ ‘ಧರ್ಮರಾಜ - ಆಧುನಿಕ ತಿರುವಾಂಕೂರು ಜನಕ ಮಾರ್ತಾಂಡ ವರ್ಮನಾದರೂ ಎಂಥವನಾಗಿದ್ದ? ಆತ ಡಚ್ ವಸಾಹತುಶಾಹಿಯ ಅವನತಿಗೆ ನಿರ್ಣಾಯಕ ಕೊನೆ ಹಾಡಿದ ಭಾರತದ ರಾಜನೇನೋ ಹೌದು. ಆದರೆ ಅದಕ್ಕೂ ಮುನ್ನ ಪಟ್ಟವೇರಲು ಸೋದರ ಸಂಬಂಧಿಗಳ ಕಗ್ಗೊಲೆ ನಡೆಸಿ, ಅವರ ಹೆಂಡಿರನ್ನು ಮೀನುಗಾರರಿಗೆ ‘ಇಟ್ಟುಕೊಳ್ಳಲು ಕೊಟ್ಟು; ಅವರ ಅರಮನೆಗಳ ನಾಶಮಾಡಿ, ಅಲ್ಲಿ ಗುಂಡಿ ತೋಡಿಸಿ ಕೆರೆಕಟ್ಟೆ ಕಟ್ಟಿಸಿದ್ದ!

ಮಲಬಾರಿನ ಜನ ಮಾರ್ತಾಂಡವರ್ಮನ ಬೆಂಕಿಯಿಂದ ಮೈಸೂರಿನ ಟಿಪ್ಪು ಬಾಣಲೆಗೆ ಬಿದ್ದರು. ಇವರಲ್ಲಿ ಯಾರ ನಡೆ ಜನಪರ, ಯಾರ ನಡೆ ಜನವಿರೋಧಿ ಎಂದು ಈ ಕಾಲದಲ್ಲಿ ನಿಂತ ನಾವು ಹೇಳುವುದು?

ಕೊಡಗನ್ನು ವಶಪಡಿಸಿಕೊಳ್ಳಲು ಹೈದರಾಲಿ ಮತ್ತು ಟಿಪ್ಪು ಪದೇಪದೇ ಆಕ್ರಮಣ ನಡೆಸಿದರು. ಅದಕ್ಕೆ ಮುಖ್ಯ ಕಾರಣ ಕೊಡಗು ವಶವಾದರೆ ಮಂಗಳೂರು ಬಂದರಿನ ಒಡೆತನ ಸಿಗುವುದೆನ್ನುವುದು. ಆದರೆ ಸ್ವಾಭಿಮಾನಿ ಮತ್ತು ಸ್ವಾತಂತ್ರ್ಯಪ್ರೇಮಿ ಕೊಡವರು ಎಂದೂ ಮಣಿಯಲಿಲ್ಲ. ತಮ್ಮ ಗುಡ್ಡಬೆಟ್ಟಗಳ ನಾಡಿನಲ್ಲಿ ಗೆರಿಲ್ಲಾ ಯುದ್ಧತಂತ್ರಗಳ ಮೂಲಕ ಅವನ ಸೇನೆಯನ್ನು ಸದಾ ಮಣಿಸಿದರು. ಹೀಗಿರುತ್ತ ಸ್ನೇಹಹಸ್ತ ಚಾಚಿ ಟಿಪ್ಪು ಮಡಿಕೇರಿಗೆ ಹೋದ. ಈ ಸಮ್ಮಿಲನಕ್ಕೆ ಭಾರೀ ಸಂಖ್ಯೆಯ ಕೊಡವರು ರಾಜಧಾನಿಯಲ್ಲಿ ಸೇರಿದರು. ಆಗ ಇದ್ದಕ್ಕಿದ್ದಂತೆ ಅವರ ಮೇಲೆ ಕರ್ನೂಲಿನ ನವಾಬ ಸೇನೆಯೊಂದಿಗೆ ಎರಗಿದ. ಅವ ಟಿಪ್ಪುವಿನ ಗೆಳೆಯ, ಅದು ಟಿಪ್ಪುವಿನ ತಂತ್ರವೇ ಆಗಿತ್ತು. ೫೦೦ ಕೊಡವರು ಅಲ್ಲೆ ಸತ್ತರು. ೪೦,೦೦೦ ಜನ ಕಾಡಿಗೆ ಓಡಿದರು. ರಾಜನೊಡನೆ ಸಾವಿರಾರು ಜನರನ್ನು ಬಂಧಿಸಿ ಶ್ರೀರಂಗಪಟ್ಟಣಕ್ಕೊಯ್ಯಲಾಯಿತು. ಹಿಂಸೆ, ಸಾವು, ಬಲವಂತದ ಮತಾಂತರ.. ಈ ಸಂಖ್ಯೆ ಅವನ ಆಸ್ಥಾನ ಇತಿಹಾಸಕಾರರದೂ ಸೇರಿದಂತೆ ೭೦೦೦೦-೮೫೦೦೦ ನಡುವೆ ತೂಗಾಡುತ್ತದೆ. ಈ ಸಂಖ್ಯೆಗಳಲ್ಲಿ ಯಾವುದು ನಿಜ? ಯಾವುದು ಉತ್ಪ್ರೇಕ್ಷೆ? ಈ ದಾಖಲೆಗಳು ನಂಬಲರ್ಹವೆ?

ಒಟ್ಟಾರೆ ಚರಿತ್ರೆಯೊಂದು ಕಣಜದ ಗೂಡು. ಕೈಹಾಕಿದರೆ ಅವು ಕುಟುಕಿಯಾವೇ ಹೊರತು ಒಂದು ಹನಿ ಮಧುವೂ ದೊರೆಯಲಾರದು.

ರಾಜರ ಕಿಂಗ್‌ಸೈಜ್ ಅಹಮು: ಬಲಿಪಶು ಯಾರು?


ಇದು ನಾಣ್ಯದ ಎರಡು ಮುಖಗಳ ಅವಲೋಕನ. ಬಹುಶಃ ಚರಿತ್ರೆಯ ಯಾವ ಪುಟ ತೆರೆದರೂ ಅದಕ್ಕೆ ಎರಡೆರೆಡು ಅರ್ಥ, ಸಾಧ್ಯತೆಗಳು ಇದ್ದೇ ಇವೆ. ಮಧ್ಯಯುಗದಲ್ಲಿ ಈ ನೆಲವನ್ನಾಳಿದ ಛಪ್ಪನ್ನಾರು ನೃಪತಿಗಳಲ್ಲಿ ಯಾವುದೇ ರಾಜನ ಚರಿತ್ರೆ ತೆಗೆಯಿರಿ, ಅವರು ತಂತಮ್ಮ ಮನೆತನದವರನ್ನು/ರಾಜ್ಯದವರನ್ನು ಕೊಲ್ಲಿಸಿ ಪಟ್ಟಕ್ಕೆ ಬಂದಿದ್ದಾರೆ. ಹೆಂಗಸರ ಮೇಲೆ, ಅದರಲ್ಲೂ ಶತ್ರು ರಾಜ್ಯದ ಹೆಂಗಸರ ಮೇಲೆ ಇನ್ನಿಲ್ಲದಂತೆ ದೌರ್ಜನ್ಯವೆಸಗಿದ್ದಾರೆ. ವಿರೋಧಿ ರಾಜನ ಧರ್ಮ ಮತ್ತು ರಾಜಸ್ವದ ಕುರುಹುಗಳನ್ನು ನಿರ್ದಯವಾಗಿ ನಾಶ ಮಾಡಿದ್ದಾರೆ. ಎಲ್ಲೋ ಅಪರೂಪಕ್ಕೊಬ್ಬ ಛತ್ರಪತಿ ಶಾಹೂ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂಥವರನ್ನು ಬಿಟ್ಟರೆ ಎಲ್ಲ ರಾಷ್ಟ್ರೀಯತೆಗಳು ತಮ್ಮ ‘ಕುಲ ತಿಲಕರೆಂದು ಆರಾಧಿಸುವ ರಾಜರುಗಳು ಲೆಕ್ಕವಿಲ್ಲದಷ್ಟು ಹೆಂಗಸರು ವಿಧವೆಯರಾಗಲು; ಸತಿ ಹೋಗಲು ಕಾರಣರಾಗಿದ್ದಾರೆ. ರಾಜರ ದೇಶಪ್ರೇಮವೆಂಬ ವೈಯಕ್ತಿಕ ಪ್ರತಿಷ್ಠೆ ಕಾಯಲು ಯುದ್ಧ ಮಾಡಿ ಇನ್ನೆಷ್ಟೊ ಜನ ಅಂಗವಿಕಲರಾಗಿ, ಮತ್ತಿನ್ನೆಷ್ಟೊ ಬಡ, ರೈತಾಪಿ ಜನರು ಯುದ್ಧದ ಖರ್ಚು ತೆರಲು ಅರೆಹೊಟ್ಟೆಯಲ್ಲಿ ಸತ್ತಿದ್ದಾರೆ. ರಾಜರು ಕೊಟ್ಟ ಕೋಟಿಗಟ್ಟಲೆ ರೂಪಾಯಿ ದಂಡ, ಯುದ್ಧಖರ್ಚು ಎಲ್ಲಿಂದ ಬಂತು? ಅವೆಲ್ಲ ತನ್ನ ರಾಜ್ಯದ ಅಥವಾ ಗೆದ್ದ ರಾಜ್ಯದ ಬಡರೈತರನ್ನು, ಜನಸಾಮಾನ್ಯರನ್ನು ಸುಲಿದೇ ಬಂತು.

ಹೀಗೆ ರಾಜರುಗಳ ಕಿಂಗ್ ಸೈಜ್ ಅಹಮನ್ನು ಪೋಷಿಸಲು ಜನಸಾಮಾನ್ಯ ತೆತ್ತ ಬೆಲೆ ಗಮನಿಸಿದರೆ; ರಾಜತ್ವ, ಶೌರ್ಯ ಮತ್ತು ರಾಷ್ಟ್ರೀಯತೆಯ ಆಚೆಗೆ ಗಮನ ಹರಿಸಿದರೆ ಕೆಡುಕಿಲ್ಲದೆ ಯಾವ ರಾಜನ ಇತಿಹಾಸವೂ ಬಿಚ್ಚಿಕೊಳ್ಳಲು ಸಾಧ್ಯವಿಲ್ಲ. ಬಹುಶಃ ರಾಜ್ಯ, ಪಟ್ಟ, ಸಿಂಹಾಸನ ಗಳಿಸಿ ಉಳಿಸಿಕೊಳ್ಳಲು ಆ ಕಾಲದ ರಾಜರಿಗೆ ಅದು ಅವಶ್ಯವಾಗಿದ್ದಿರಲೂಬಹುದು. ಏಕೆಂದರೆ ಆಗಿನ್ನೂ ಮಾರ್ಕ್ಸ್, ಲಿಂಕನ್, ಗಾಂಧಿ, ಅಂಬೇಡ್ಕರ್, ಲೋಹಿಯಾ ಹುಟ್ಟಿರಲಿಲ್ಲ. ಆಗಿನ್ನೂ ಪ್ರಜಾಪ್ರಭುತ್ವದ ಕನಸು ಯಾರಿಗೂ ಬಿದ್ದಿರಲಿಲ್ಲ. ಅದರಲ್ಲೂ ಬುದ್ಧನ ಮರೆತ ಭಾರತವು ಆಂತರಿಕ ಯುದ್ಧಗಳಲ್ಲಿ ಹರಿಸಿದ ರಕ್ತಹೊಳೆ ಅರಬಿ ಸಾಗರವನ್ನೂ, ಬಂಗಾಳ ಕೊಲ್ಲಿಯನ್ನೂ, ಹಿಂದೂ ಸಾಗರವನ್ನೂ ಕೆಂಪಾಗಿಸಿತ್ತು.

ಇರಲಿ, ಅವರೆಲ್ಲ ಹಾಗಿದ್ದರು, ಆಗಿಹೋಯಿತು.

ಆದರೆ ಕರ್ನಾಟಕದ ಹಿಂದೂ/ಕ್ರೈಸ್ತ/ಮುಸ್ಲಿಂ ಧಾರ್ಮಿಕ ಸಮುದಾಯಗಳ ನೆನಪುಗಳಲ್ಲಿ ತದ್ವಿರುದ್ಧ ಚಿತ್ರಣ ಹೊಂದಿದ ಎಂದೋ ಆಳಿದ ರಾಜ ಟಿಪ್ಪುವನ್ನು ಇವತ್ತು ಮುಸ್ಲಿಮರಿಗೆ ಐಡೆಂಟಿಟಿ ಕೊಡುವ ನಾಯಕನಂತೆ ಬಿಂಬಿಸುವುದು ಎಷ್ಟು ಸರಿ?

ಚರಿತ್ರೆಯಲ್ಲಿರಬೇಕಾದವರನ್ನು ಅಲ್ಲಿ ಹಾಗೇ ಬಿಡದೆ ಅವರನ್ನು ಎತ್ತಿ ತಂದು ಧರ್ಮಾಂಧನೋ, ಧರ್ಮ ಸಹಿಷ್ಣುವೋ; ದೇಶಭಕ್ತನೋ ದೇಶದ್ರೋಹಿಯೋ ಎಂದು ಚರ್ಚಿಸುವುದು; ಚರ್ಚೆ ಹುಟ್ಟುಹಾಕುವುದು ಅಳಿದ ರಾಜನಿಗೂ ಶೋಭೆಯಲ್ಲ. ಪ್ರಜಾಪ್ರಭುತ್ವದ ಸರ್ಕಾರಕ್ಕೆ ಖಂಡಿತಾ ಶೋಭೆಯಲ್ಲ. ಟಿಪ್ಪುವಿಗೆ ಹಜರತ್ ಎಂದು ಸಂಬೋಧಿಸಿ ಜಯಂತಿ ಆಚರಿಸುವ ಸರ್ಕಾರದ ನಡೆ ಇತಿಹಾಸವನ್ನು ಕೋಮುವಾದೀಕರಣಗೊಳಿಸಲು ಸಹಾಯಮಾಡುವುದಷ್ಟೇ ಅಲ್ಲ, ವಸ್ತುನಿಷ್ಠವಾಗಿ ಇತಿಹಾಸವನ್ನು ತಿಳಿಯದಂತೆಯೂ ಮಾಡುತ್ತದೆ.

ಸಂಘಪರಿವಾರದ ಸಂಘಟನೆ, ಪಕ್ಷಗಳಿಗೆ ಮುಸಲ್ಮಾನರು ಎಂದರೆ ಅಬ್ದುಲ್ ಕಲಾಮರಂಥ ರುದ್ರವೀಣೆ ಬಾರಿಸುವ, ಸಂಸ್ಕೃತ ಕಲಿತು ವೇದ ಓದುವ, ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ ಗೋವುಗಳು ಬೇಕು. ಅದೇ ಸೆಕ್ಯುಲರ್ ಕಾಂಗ್ರೆಸ್ಸಿಗೆ ಸಂಘಪರಿವಾರವು ಖಂಡತುಂಡ ವಿರೋಧಿಸುವ ಟಿಪ್ಪುವಿನಂಥ ರಾಜನೇ ಏಕೆ ಬೇಕು? ಉಳಿದೆಲ್ಲ ಜಾತಿ, ಸಮುದಾಯಗಳಿಗೆ ವಾಲ್ಮೀಕಿ, ಕನಕ, ನಾರಾಯಣ ಗುರು, ಬಸವಣ್ಣನಂತಹ ಸಾಂಸ್ಕೃತಿಕ ಅಥವಾ ಸಮಾಜ ಸುಧಾರಣೆಗೆ ಶ್ರಮಿಸಿದ ಸುಧಾರಣಾವಾದಿ ನಾಯಕರಿದ್ದರೆ ಮುಸ್ಲಿಮರಿಗೆ ಮಾತ್ರ ಅಳಿದ ರಾಜನೊಬ್ಬನನ್ನು ಸಮುದಾಯದ ನಾಯಕನೆಂಬಂತೆ ಬಿಂಬಿಸುವುದು ಏಕೆ? ಷಿಯಾಸುನ್ನಿ, ಹಿಂದೂಮುಸ್ಲಿಂ ಭಾವೈಕ್ಯಕ್ಕೆ ಶ್ರಮಿಸಿದ ಬಿಜಾಪುರದ ದೊರೆ; ಗುಲಬರ್ಗಾದ ಸೂಫಿ ಬಂದೇ ನವಾಜರ ಶಿಷ್ಯ; ಕವಿ, ಕಲಾವಿದ ಇಬ್ರಾಹಿಂ ಆದಿಲ್ ಶಾಹ ಇವತ್ತು ಯಾರಿಗೂ ನೆನಪಾಗುತ್ತಿಲ್ಲ ಏಕೆ? ಶಿಶುನಾಳ ಶರೀಫರಾಗಲೀ, ಮುಸ್ಲಿಮರಲ್ಲಿ ಆಧುನಿಕ ಶಿಕ್ಷಣಕ್ಕೆ ಶ್ರಮಿಸಿದ ಸರ್ ಸಯ್ಯದ್ ಅಹ್ಮದ್ ಖಾನ್ ಅವರಾಗಲೀ, ವರ್ತಮಾನಕ್ಕೆ ತಕ್ಕಂತೆ ಇಸ್ಲಾಮನ್ನು ಪ್ರಸ್ತುತಗೊಳಿಸಿದ ಅಸ್ಘರ್ ಅಲಿ ಇಂಜಿನಿಯರರಾಗಲೀ ಅಥವಾ ಈ ನಾಡಿನ ಉದ್ದಗಲ ಸೌಹಾರ್ದ ಬಾಳ್ವೆಗೆ ಶ್ರಮಿಸಿದ; ಇವತ್ತಿಗೂ ಅಳಿದುಳಿದ ಸೌಹಾರ್ದದ ನಿಜಕುರುಹುಗಳಾದ ದರ್ಗಾದ ಸಂತರಾಗಲೀ ಯಾರಿಗೂ ಬೇಕಾಗಿಲ್ಲ ಏಕೆ?

ಇನ್ನಾದರೂ ರಕ್ತ ಪಿಪಾಸುತನವೇ ಸಿಂಹಾಸನದ ಆಧಾರವಾಗಿದ್ದ ರಾಜ-ಗೌಡ-ನಾಯಕ-ಸುಲ್ತಾನ-ದೊರೆಗಳನ್ನು ನಮ್ಮ ವಿಮಾನ ನಿಲ್ದಾಣ, ಪಾರ್ಕು, ರೈಲ್ವೇಸ್ಟೇಷನ್ನು, ರಸ್ತೆಗಳಿಗೆ ಹೆಸರಾಗಿ ಇಡುವ, ರಾಜಾರಾಧನೆ ನಡೆಸುವ ಪರಿಪಾಠ ನಿಲಿಸಿ ಅವರವರ ಗೋರಿಗಳಲ್ಲಿ ಅವರು ಆರಾಮಾಗಿ ಮಲಗಲು ಬಿಡಬೇಕು. ಈ ನೆಲದ ಸಾಂಸ್ಕೃತಿಕ ಎಳೆಗಳ ಕಾಪಿಟ್ಟ, ಸೌಹಾರ್ದ ಕಾಪಾಡಿದ ಹೊಸಚಹರೆಗಳನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು.

ಇವತ್ತು ಮುಸ್ಲಿಂ ಧರ್ಮ ಮತ್ತು ಸಮುದಾಯ ಹಿಂದೆಂದಿಗಿಂತ ಒಳಸಂಕಷ್ಟವನ್ನೆದುರಿಸುತ್ತಿದೆ. ವಿಶ್ವದ ಅತಿ ಹೆಚ್ಚು ಸಿರಿವಂತರು ಹಾಗೂ ಅತಿ ಹೆಚ್ಚು ಬಡವರು ಇಸ್ಲಾಮಿನ ಅನುಯಾಯಿಗಳಾಗಿದ್ದಾರೆ. ಒಂದೆಡೆ ಬಂಡವಾಳದಿಂದ ಹರಿದು ಬರುವ ದುಡ್ಡು ಮೈಗೂಡಿಸುವ ಆಧುನಿಕತೆ; ಮತ್ತೊಂದೆಡೆ ಯಾವುದೂ ಬದಲಾಗಬಾರದೆನ್ನುವ ಗಾಢ ನಂಬಿಕೆಯ ಧರ್ಮ - ಈ ಎರಡರ ಹಗ್ಗಜಗ್ಗಾಟದಲ್ಲಿ ಕೊನೆಗು ಬಲಿಯಾಗುತ್ತಿರುವುದು ಯಾವುದು ಹಾಗೂ ಯಾರು ಎನ್ನುವುದರ ಬಗೆಗೆ ಅಂತಾರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಸ್ಲಿಂ ಸಮಾಜ ಚಿಂತಿಸಬೇಕಿದೆ. ಅದರಲ್ಲೂ ಬಡ, ಕೆಳವರ್ಗದವರೇ ಹೆಚ್ಚಿರುವ ಭಾರತದ ಮುಸ್ಲಿಮರು ಈ ದೇಶದಲ್ಲಿ ಧರ್ಮವನ್ನು ಎಷ್ಟು, ಹೇಗೆ ಇಟ್ಟುಕೊಳ್ಳಬೇಕೆಂದು ಯೋಚಿಸಬೇಕಿದೆ.

ಹೀಗಿರುತ್ತ ಕರ್ನಾಟಕದ ಮುಸ್ಲಿಮರಿಗೆ ಟಿಪ್ಪು ಜಯಂತಿ ಆಚರಿಸುವುದು ನೆಮ್ಮದಿಯ ಭಾವ, ಸುರಕ್ಷಿತ ಭಾವ ಮೂಡಿಸುವುದೆಂಬ ಭ್ರಮೆ ಸರ್ಕಾರ, ಸಮಾಜಕ್ಕೆ ಇದ್ದರೆ ಅದು ಆತ್ಮಘಾತುಕ ಭೋಳೇತನವಲ್ಲದೆ ಮತ್ತೇನಲ್ಲ. ಇನ್ನಾದರೂ ಪ್ರಜಾಪ್ರಭುತ್ವ ದೇಶದ ಸೆಕ್ಯುಲರ್ ಸರ್ಕಾರಗಳು ಇಸ್ಲಾಂ ಸೇರಿದಂತೆ ಎಲ್ಲ ಧರ್ಮಗಳು ಮತ್ತು ಅದರ ಅನುಯಾಯಿಗಳಿಗೆ ಧರ್ಮವನ್ನು ಚಲನಶೀಲಗೊಳಿಸುವ ಅವಕಾಶ ಮಾಡಿಕೊಡಬೇಕು. ಒಳವಿಮರ್ಶೆ ಇಲ್ಲದೇ ಇರುವ ಯಾವುದೇ ಸಾಂಸ್ಥಿಕ ವ್ಯವಸ್ಥೆಯೂ ಜಡ್ಡುಗಟ್ಟಿ ಹೋಗುತ್ತದೆ. ಅದೇ ಹಾದಿಯಲ್ಲಿ ಧರ್ಮಗಳು ನಡೆಯದಂತೆ ತಡೆಯಲು ದಿಟ್ಟ ದನಿಗಳು ಕೇಳಲು ಅವಕಾಶ ಮಾಡಿಕೊಡಬೇಕು. ಅದಕ್ಕೆ ಪೂರಕವಾಗಿ ಶಿಕ್ಷಣ, ಉದ್ಯೋಗಾವಕಾಶ, ಸಮಾಜದ ಆಗುಹೋಗುಗಳಲ್ಲಿ ಒಳಗೊಳ್ಳುವಿಕೆ ಮುಂತಾದ ನಡೆಗಳು ಸಮುದಾಯವನ್ನು ಸುರಕ್ಷಿತ, ಸುಸ್ಥಿರ ಬದುಕಿಗೆ ಕೊಂಡೊಯ್ಯಬಲ್ಲವೇ ಹೊರತು ಜಾತಿ/ಧರ್ಮಕ್ಕೊಂದು ಜಯಂತಿ ಆಚರಿಸುವಂಥ ಸಾಂಕೇತಿಕ ಕ್ರಿಯೆಗಳಿಂದಲ್ಲ ಎಂದು ಆಳುವವರಿಗೆ ತಿಳಿಸಿಹೇಳಬೇಕು.
      


Tuesday 10 November 2015

ಸುರ್ಜಿತ್ ಪತಾರ್ ಪಂಜಾಬಿ ಕವಿತೆ




ಸುರ್ಜಿತ್ ಪತಾರ್ ಪಂಜಾಬಿಯ ಮುಖ್ಯ ಕವಿ. ಇದುವರೆಗೆ ೭ ಕವನ ಸಂಕಲನಗಳನ್ನೂ, ಒಂದು ಗದ್ಯ ಬರಹ ಸಂಕಲನವನ್ನೂ ಪ್ರಕಟಿಸಿದ್ದಾರೆ. ಹಲವು ಯೂರೋಪಿನ ನಾಟಕಗಳನ್ನು ಪಂಜಾಬಿಗೆ ರೂಪಾಂತರ ಮಾಡಿದ್ದಾರೆ. ಪದ್ಮಶ್ರೀ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಸಮ್ಮಾನ ಗಳಿಸಿದ್ದಾರೆ.


೧ ನನ್ನಮ್ಮ ಮತ್ತು ನನ್ನ ಕವಿತೆ

ನನ್ನಮ್ಮನಿಗೆ ನನ್ನ ಕವಿತೆ ಅರ್ಥವೇ ಆಗುವುದಿಲ್ಲ
ಮಾತೃಭಾಷೆಯಲ್ಲೇ ನಾನು ಬರೆದಿದ್ದರೂ ಸಹಾ.

ಅವಳು ತಿಳಿದುಕೊಳ್ಳಲು ಆದದ್ದು ಇಷ್ಟೇ:
ತನ್ನ ಮಗನ ಮನದಲ್ಲಿ ಎಂಥದೋ ದುಃಖ ಮಡುಗಟ್ಟಿದೆ.

ಆದರೆ ನಾನಿಲ್ಲೆ ಇರುವಾಗ
ಈ ದುಃಖ ಅವನ ಬಳಿಗೆ ಬಂದದ್ದಾದರೂ ಹೇಗೆ?

ಅಕ್ಷರ ಅರಿಯದ ಅಮ್ಮ
ನನ್ನ ಕವಿತೆಯನ್ನು ಬಹುಸೂಕ್ಷ್ಮವಾಗಿ ಜಾಲಾಡಿದಳು
ತನಗೆ ತಾನೇ ಹೇಳಿಕೊಂಡಳು:
ನೋಡಿ ಮಹಾಜನರೇ, ಇಲ್ಲಿ ನೋಡಿ
ನಮ್ಮ ಹೊಟ್ಟೆಯಿಂದ ನಾವೇ ಹುಟ್ಟಿಸಿದ ನಮ್ಮ ಮಕ್ಕಳು
ತಮ್ಮ ದುಃಖವನ್ನು ಕಾಗದಕ್ಕೆ ಹೇಳುತ್ತಾರೆ,
ನಮಗಲ್ಲ.

ಅವಳು ಕಾಗದವ ತನ್ನೆದೆಗೆ ಒತ್ತಿ ಹಿಡಿದಳು
ಅದಾದರೂ
ತನ್ನನ್ನು ತನ್ನ ಮಗನ ಬಳಿ
ತಂದೀತೆಂಬ ಆಸೆಯಿಂದ..

೨ ಶಬುದಗಳು ಬಲು ಹಗುರ




ಶಬುದಗಳು ಬಲು ಹಗುರ
ಎಲ್ಲಿಂದಲಾದರೂ ಕಿತ್ತು
ಎಲ್ಲಿಯಾದರೂ ಇಟ್ಟುಬಿಡಬಹುದು.

‘ಕಡಲು’ ಎಂಬ ಪದ ತೆಗೆದುಕೊ
ನಗು’ವಿನ ಪಕ್ಕ ಇಡು
‘ನಗುವ ಕಡಲು’ ಆಯಿತು.

‘ಮರ’ ಎಂಬ ಪದ ತಗೊ
‘ನಡೆ’ ಯ ಪಕ್ಕ ಇಡು
‘ನಡೆವ ಮರ’ ಸೃಷ್ಟಿಸು

ಎಷ್ಟು ಸುಲಭ!
ಎರಡು ಪದ ಹೆಕ್ಕು, ಕೂಡಿಸು.
ಹಸಿರು ಸೂರ್ಯ
ಎಣ್ಣೆಗೆಂಪು ಚಂದ್ರ
ಹಾರುವ ಹಣತೆ
ಹಾಡುವ ತಾರೆ..

ಸುಲಭ!
ಹೆಕ್ಕಿಕೊ, ಇಡು.

ಆದರೆ ಕಷ್ಟ ಇರುವುದು
ಎಲ್ಲಿಂದ ಹೆಕ್ಕಿ
ಎಲ್ಲಿ ಇಡಬೇಕೆಂದು ತಿಳಿಯಲು.

ಕಷ್ಟ ಯಾಕೆಂದರೆ
ಅವನ್ನು ಅವು ಇಟ್ಟ ಜಾಗದಲ್ಲೆ
ಶತಮಾನಗಟ್ಟಲೆ ಉಳಿಯುವಂಥ ಜಾಗ
ಹುಡುಕಬೇಕಲ್ಲ, ಅದಕ್ಕೆ.

ಇಲ್ಲವಾದರೆ
ಸತ್ಯದ ಒಂದು ಮೆಲುಗಾಳಿ ಬೀಸಿದರೆ
ಹಸಿರು ಸೂರ್ಯ
ಎಣ್ಣೆಗೆಂಪು ಚಂದ್ರ
ಹಾಡುವ ತಾರೆಗಳೆಲ್ಲ ಚದುರಿಹೋಗುತ್ತವೆ.
ಏಕೆಂದರೆ ಶಬುದಗಳು ಬಲು ಹಗುರವಾಗಿವೆ.

೩ ಶ್ರೀಮಾನ್ ಕವಿ


ಮೊದಲ ಸಾಲು ಬರೆಯುತ್ತೇನೆ
ಆಳುವ ಅರಸನ
ಭಯದಲ್ಲಿ ಮುರುಟಿ
ಆ ಸಾಲನ್ನು ಚಕಚಕ ಕತ್ತರಿಸುತ್ತೇನೆ.

ಮತ್ತೊಂದು ಸಾಲು ಬರೆಯುತ್ತೇನೆ
ಗೆರಿಲ್ಲಾ ಬಂಡುಕೋರರ ನೆನಪಾಗಿ
ಹೆದರಿ ಕತ್ತರಿಸುತ್ತೇನೆ

ಹೀಗೆ ನಾನು
ನನ್ನದೇ ನೂರಾರು ಸಾಲುಗಳ ಕೊಂದೆ
ಜೀವ ಉಳಿಸಿಕೊಳ್ಳಲು.

ಆಗಾಗ ಹತ ಸಾಲುಗಳಿಂದ ಪಿಶಾಚಿಗಳೆದ್ದು
ನನ್ನ ಸುತ್ತ ತಿರುಗುತ್ತ ಕೇಳುತ್ತವೆ:

‘ಶ್ರೀಮಾನ್ ಕವಿಯೇ,
ನೀನೊಬ್ಬ ಕವಿಯೊ
ಅಥವಾ ಕಾವ್ಯ ಹಂತಕನೋ?’


೪ ಪಂಚನದಿಗಳ ನಾಡು

ಶೋಕ
ಹಿಂಸೆ
ಭಯ
ನಿರಾಶೆ
ಮತ್ತು ಅನ್ಯಾಯ

ಇವು ಇತ್ತೀಚಿಗೆ ನನ್ನ ಪಂಚನದಿಗಳ ಹೆಸರು.

ಒಂದಾನೊಂದು ಕಾಲದಲ್ಲಿ ಅದು
ಸಟ್ಲೆಜ್
ಬಿಯಾಸ್
ರಾವಿ
ಝೀಲಂ
ಮತ್ತು ಚಿನಾಬ್
ಆಗಿತ್ತು.

ನನಗೆ ಭರವಸೆಯಿದೆ
ಅಂಥ ಒಂದು ದಿನ
ಒಂದಲ್ಲ ಒಮ್ಮೆ ಬರುತ್ತದೆ
ಆಗ ನನ್ನ ಪಂಚನದಿಗಳ ಹೆಸರು
ಸಂಗೀತ
ಕಾವ್ಯ
ಪ್ರೇಮ
ಸೌಂದರ್ಯ
ಮತ್ತು ನ್ಯಾಯ
ವೇ ಆಗಿರುತ್ತದೆ.


೫  ಆ ದಿನ


ಹೇಗಾದರೂ ಆ ‘ದಿನ’
ಮತ್ತೆ ಸಿಕ್ಕಿಬಿಟ್ಟರೆ
ಅದರ ಬಿಳಿಹಂಸೆಯಂತಹ ಗಾಯಗೊಂಡ ಕಾಯಕೆ
ಮುಲಾಮು ಸವರುತ್ತೇನೆ

ಆದರೆ ಒಂದು ‘ದಿನ’ ಎಂದರೆ
ಅಲ್ಲಿಲ್ಲಿ ಅಂಡಲೆದು
ಇದ್ದಕ್ಕಿದ್ದಂತೆ ಒಂದು ಸಂಜೆ
ಚಿಂದಿಯುಟ್ಟು ಮನೆಗೆ ಮರಳುವ;
ರೈಲಿಗೆ ಕಾಯುತ್ತ ಯಾವುದೋ ಸ್ಟೇಷನ್ನಿನಲ್ಲಿ ಸಿಕ್ಕ
ಮನೆ ಬಿಟ್ಟು ಓಡಿಹೋದ ಮಗನಂತಲ್ಲ..

ದಿನಗಳು ಮನೆಬಿಟ್ಟು ಓಡಿಹೋದ ತಿರುಬೋಕಿಗಳಲ್ಲ
ದಿನವೆಂದರೆ
ನಮ್ಮ ಮಾತಿನಿಂದ, ಮೌನದಿಂದ
ಕೊಲ್ಲಲ್ಪಟ್ಟ ದಿನದ ಊಳಿಡುವ ಭೂತ.
ಅವುಗಳ ಗಾಯ
ಈಗ ನಮ್ಮ ಕೈಯಳತೆಗೆ ಮೀರಿದ್ದು

ಈ ದಿನದ ಆಕ್ರಂದನ
ನಿನ್ನೆ ದಿನವ ತಲುಪಲಾರದು
ಶತಶತಮಾನ ಕಳೆದರೂ..




ನ್ಯಾಯ ಕೇಳಬೇಡವೆಂದು ನಾನ್ಯಾವಾಗ ಹೇಳಿದೆ?
ನಿನ್ನ ಹಕ್ಕುಗಳಿಗಾಗಿ ಹೋರಾಡಬೇಡವೆಂದೆನೆ?
ಆದರೆ ನಿಜ ಶತ್ರು ಯಾರೆಂದು ಗುರುತಿಸದೆ
ನಿನ್ನದೇ ಕೈಕಾಲು ಕಡಿದುಕೊಳಬೇಡ ಅಷ್ಟೆ.

ಬೇಡವಾದಲ್ಲೆಲ್ಲ ಸುಮ್ಮಸುಮ್ಮನೆ ಹಾರಾಡುತ್ತ
ನಿನ್ನ ರೆಕ್ಕೆಗಳ ಗೌರವ ಕಳೆಯಬೇಡ
ದುಃಖದ ವಿರುದ್ಧ ಹೋರಾಡಬೇಕಿದೆ
ಬಡತನದ ವಿರುದ್ಧ ಹೋರಾಡಲಿಕ್ಕಿದೆ
ತಲೆ ಕಾಯ್ವ ನೆಪದಲ್ಲಿ ತಲೆ ತೆಗೆವವರ
ವಿರುದ್ಧವೂ ನಾವು ಹೋರಾಡಬೇಕಿದೆ

ನಿನ್ನ ಕತ್ತಿ ಮೊನೆಯಂಚಿಗೆ ನನ್ನ ಪ್ರಾಣ ಕೊಡಬಲ್ಲೆ
ಅದು ಅಮುಖ್ಯವೆಂದು ಯಾರಾದರು ಹೇಳಬಹುದೆ?

ಅದರ ಕಡೆ ಗಮನ ಹರಿಸು, ಚೆನ್ನಾಗಿ ಮಸೆ
ಅಲಗುಗಳ ಹರಿತಗೊಳಿಸಿ ಇಡು
ಕತ್ತಲಲ್ಲಿ ಬೆಳಕಾಗಿ ಬರೆಯುವಂತೆ
ಬೆಂಕಿಯ ಜ್ವಾಲೆಯಂತೆ ಅದನಿಡು
ಅಂಥ ಕಾಲವೂ ಇದೆ, ಆಗ
ಕತ್ತಿಯಷ್ಟೆ ಬರೆಯಬಲ್ಲುದಾಗಿದೆ..

ಕ್ರಮಿಸಿದ ಹಾದಿಯ ಮತ್ತೇಕೆ ಕ್ರಮಿಸುವೆ?
ಎದುರಿನ ಹಾದಿ ಎಷ್ಟೊಂದು ಕಡಿದಾಗಿದೆ..

(ಇಂಗ್ಲಿಷ್‌ಗೆ: ಅಜ್ಮೇರ್ ರೋದೆ
ಕನ್ನಡಕ್ಕೆ: ಅನುಪಮಾ)

ಚಿತ್ರಗಳು: ಕೃಷ್ಣ ಗಿಳಿಯಾರ್

Sunday 1 November 2015

ಚರಿತ್ರೆಯೆಂದರೆ...




ಶಾಲೆಗೆ ಹೋಗುವ ಮಗಳು ಕೇಳಿದಳು:
‘ಅಮ್ಮಾ, ಚರಿತ್ರೆಯೆಂದರೆ ಏನು?’

ಹೇಳಿದೆ.

‘ಹಾಗಿದ್ದರೆ ಈ ಕೆಂಚಮ್ಮನ ಅಮ್ಮನಮ್ಮನಮ್ಮನಮ್ಮ
ಯಾರ ಮನೆಯ ಪಾತ್ರೆ ತೊಳೆಯುತ್ತಿದ್ದಳು?’

‘ಗೊತ್ತಿಲ್ಲ ಮಗಳೆ..’

‘ನನ್ನಜ್ಜನಜ್ಜನಜ್ಜನಜ್ಜ ಯಾರ ಮನೆ ಗಾಡಿ ಹೊಡೆಯುತ್ತಿದ್ದ?’

‘ಅದೂ ಗೊತ್ತಿಲ್ಲ ಮಗಳೆ..’

‘ನಮಗೆ ಚರಿತ್ರೆಯೇ ಇಲ್ಲವೇ?
ಸರಿಯಾಗಿ ಹುಡುಕಿದೆ ತಾನೆ?’

ಚರಿತ್ರೆಯ ಪುಟಗಳ ನಡುವೆ
ಶಂಕಿಸುವ ಮಗಳ ಕೈಹಿಡಿದು
ಕಾಲಾಡಿಸುತ್ತಾ, ಹುಡುಕುತ್ತ ನಡೆದೆ.

ರಾಜಾಧಿರಾಜ ಮಹಾರಾಜರ ಮೂರ್ತಿಗಳು
ಧರೆಗಿಳಿದ ದೇವಿಯರಾದ ಅಮ್ಮಣ್ಣಿಯರು
ಗಜತುರಗಕಾಲಾಳಿನ ಅಕ್ಷೋಹಿಣಿ ಸೇನೆಗಳು
ವಿಜಯ ಪತಾಕೆಗಳು ದುಂದುಭಿ ಜಾಗಟೆಗಳು
ಕಿರೀಟ ತೊಟ್ಟು ಭುಜಕೀರ್ತಿ ಹೊತ್ತು
ಧೂಳಿನೊಳಗೇ ಹೊಳೆಯುತ್ತಿದ್ದವು

ಗೆದ್ದ ಯುದ್ಧ ಪಡೆದ ಬಿರುದು
ಸುವರ್ಣ ಸಿಂಹಾಸನದ ನೀತಿ ನ್ಯಾಯ
ಅಂಬಾರಿಯಲಿ ಕುಳಿತ ಮಹಾಕಾವ್ಯ
ಅಂತಃಪುರದ ಗತ್ತು ವೈಭವದ ಗಮ್ಮತ್ತು
ಎಲ್ಲದರ ಲೆಕ್ಕ ದಾಖಲೂ
ತುದಿ ಬೆರಳಲೆಂಬಂತೆ ಸಿಕ್ಕಿಬಿಟ್ಟಿತು

ದಾಖಲಿಸಿದವನ ತೊಗಲ ನಿಶಾನೆ
ಚರಿತ್ರೆಯ ಅಣುಕಣದಲ್ಲಿ ಹುದುಗಿಕೊಂಡಿತ್ತು.

ಅಷ್ಟೇ.

ಸೆರೆಸಿಕ್ಕ ಅರಸನ ಕಾಲಾಳಿನ ಕತೆ
ಕಾದಾಡುತ್ತ ಹೆಳವಾದವರು ಬದುಕಿ ನರಳಿದ ಶಿಕ್ಷೆ
ನಾಯಿನರಿ ಪಾಲಾದ ಅನಾಥ ಹೆಣಗಳ ಸಂಖ್ಯೆ
ದಫ್ತರದಲೆಲ್ಲೂ ಸಿಗಲಿಲ್ಲ

ನೆತ್ತರ ಕುಡಿದು ಹಸಿಯಾದ ಮಣ್ಣು
ಗರಿಕೆ ಮೊಳೆಯದ್ದಕ್ಕೆ ಕಾರಣ ಹೇಳಲಿಲ್ಲ
ಕುಸಿದ ಸಾವಿರ ಮನೆಗಳ
ಅಂತಃಸ್ಸಾಕ್ಷಿಯಿಲ್ಲದೆ ಅಲುಗಾಡಿದ ಅರಮನೆಗಳ
ಅಡಿ ಹೂತುಹೋದ ಅವಶೇಷಗಳ
ದಾರುಣ ಕತೆಯನ್ನದು ಬೆಳೆಸಲಿಲ್ಲ
ಸತಿಯಾಗದ ವಿಧವೆಯರ ಅರೆಬೆಂದ ಬಾಳಿಗೆ
ಮಾಸ್ತಿಕಲ್ಲು ನಿಲಿಸಿರಲಿಲ್ಲ
ಒಂಟಿ ಹುಲಿ ಹೊಡೆದವಗಲ್ಲದೆ
ಕೋಟಿ ದನ ಕಾದವಗೆ ಸನ್ಮಾನವಿರಲಿಲ್ಲ
ನಿತ್ಯ ನಿಶ್ಶಸ್ತ್ರ ಹೋರಾಡಿದವರ
ಮಸುಕು ನೆನಪೂ ಆ ಪುಟಗಳಿಗಿಲ್ಲ

ಮಗಳೇ,
ಚರಿತ್ರೆಯೆಂದರೆ ಹೀಗೇ
ಮುಳುಗಿದ ಹಡಗಿನ ತೇಲುವ ಹಲಗೆಗಳ
ಕೂಡಿಸಿ ಊಹಿಸುವ ಕೆಲಸ...

ಅದು ರಾಜ-ಮಂತ್ರಿಯ ಚರಿತೆ
ಯುದ್ಧ ಹಿಂಸೆಯ ಚರಿತೆ
ಗೋರಿಯೆಂದೆದ್ದು ಸುಳಿವ ಭೂತಗಳು
ಗುದ್ದಾಡುತ್ತ ವೀರಗಲ್ಲುಗಳ ಕಾಯುತ್ತವೆ
ರಕ್ತದಕ್ಷರಗಳು ಮಾಸದಂತೆ
ಮತ್ತೆಮತ್ತೆ ತಿದ್ದುತ್ತವೆ
ಕದನಕುತೂಹಲದಲಿ
ಖಾಲಿ ಬಿಳಿ ಪುಟಗಳ
ಹುಡುಹುಡುಕಿ ತುಂಬಿಸುತ್ತವೆ
ನಿನ್ನೆಯ ಸುಳ್ಳುಕತೆಗೆ ಹೊಸ ಬಣ್ಣತುಂಬಿ
ಕೋಲೂರಿ ನಾಳೆಗೆ ದಾಟಿಸುತ್ತವೆ..

ಬರೆದ ಚರಿತ್ರೆ ಹೀಗೆ ಮಗಳೇ...

ಅಲ್ಲಿ
ಸಂಬಂಧವಿಲ್ಲ ಅನುಬಂಧವಿಲ್ಲ
ಕರುಣೆಯಿಲ್ಲ ಕಾರಣವಿಲ್ಲ
ಕೆಂಚಮ್ಮ ನಂಜಯ್ಯನವರಿಗೆ ಜಾಗವಿಲ್ಲ.
ಕಡಲ ಸೇರಿದ ಮಳೆಹನಿಯ ದನಿಯು
ಮಾತಾಗಿ ದಾಖಲಾಗುವುದಿಲ್ಲ

ಮಗಳೇ,
ಚರಿತ್ರೆ ನಿನ್ನ ನ್ಯಾಯಸೂಕ್ಷ್ಮದ ಮನಸಿನಲ್ಲಿದೆ
ನಿನ್ನೆಯ ಕಲ್ಪಿಸುವ ಇಂದಿನ ಕಣ್ಣಿನಲ್ಲಿದೆ
ಅಕ್ಷರಗಳಲಲ್ಲ, ಆಡದೇ ಉಳಿದವರ ಧಮನಿಗಳಲ್ಲಿದೆ
ನೊಂದವಗೆ ಮಿಡಿವ ಎದೆ ಬಡಿತದಲಿ ಅಡಗಿದೆ.


(ಚಿತ್ರಗಳು: ಕೃಷ್ಣ ಗಿಳಿಯಾರ್)

Sunday 25 October 2015

ಧಾನ್ಯ ಚರಿತೆ




‘ಅಯ್ಯೋ, ನಾ ರಾತ್ರೀ ಊಟ ಬಿಟ್ ಏಳೆಂಟು ವರ್ಷಾಯ್ತ್ರ ಅಮಾ, ದಿನಕೆ ಒಂದು ಊಟ. ಒಂದೇ ಊಟ..’

ಇದು ಸಿಹಿಮೂತ್ರ ರೋಗಿಗಳ ವಿಷಾದ ಬೆರೆತ ನಿಟ್ಟುಸಿರು. ಅವರು ರಾತ್ರಿ ಉಪವಾಸವೇನೂ ಇರುವುದಿಲ್ಲ, ಆದರೆ ಅನ್ನ ಬಿಡುವುದೆಂದರೆ ಅವರಿಗೆ ‘ಊಟವೇ ಬಿಟ್ಟ’ ಹಾಗೆ. ಆಧುನಿಕ ಶ್ರಮರಹಿತ ಜೀವನದಲ್ಲಿ ಸಿಹಿಮೂತ್ರ ರೋಗವು ವಯಸ್ಸು, ವರ್ಗ, ಜಾತಿ ಇಲ್ಲದೆ ಎಲ್ಲರನ್ನು ಬಾಧಿಸತೊಡಗಿದ್ದು ಅವರಿಗೆ ಅಕ್ಕಿ ಕಡಿಮೆ ಮಾಡಿ ಎನ್ನುವ ಆಹಾರ ಸಲಹೆ ನೀಡಲಾಗುತ್ತಿದೆ. ಉಳಿದ ದವಸಗಳಿಗೆ ಹೋಲಿಸಿದರೆ ಹೆಚ್ಚು ಪಾಲಿಶ್ ಆದ, ಕಡಿಮೆ ನಾರಿನಂಶ ಹೊಂದಿದ, ಹೆಚ್ಚು ಕ್ಯಾಲೊರಿ ನೀಡುವ ಅಕ್ಕಿ ಬಳಕೆಯನ್ನು ಮಿತಗೊಳಿಸುವುದು ಸಿಹಿಮೂತ್ರ ನಿಯಂತ್ರಣಕ್ಕೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಅವಶ್ಯವೇ. ಆದರೂ ಅಕ್ಕಿ ಬಿಡುವುದೆಂದರೆ ಹಲವರಿಗೆ ರುಚಿಯ ಸಖ್ಯವನ್ನೇ ಬಿಟ್ಟ ಹಾಗೆ. ಅಕ್ಕಿಯಿಂದ ಅನ್ನವಷ್ಟೆ ಅಲ್ಲ, ಎಂತೆಂತಹ ಖಾದ್ಯ ಕಂಡುಕೊಂಡಿರುವವರು ನಾವು!? ಇಡ್ಲಿ, ದೋಸೆ, ಪಡ್ಡು, ರೊಟ್ಟಿ, ಕಡುಬುಗಳು, ಅವಲಕ್ಕಿ, ಪತ್ರೊಡೆ, ಪಾಯಸ, ಭಾತ್‌ಗಳು, ತರತರಹೇವಾರಿ ಚಿತ್ರಾನ್ನ, ಉಂಡೆ, ಕರಿದ ತಿಂಡಿಗಳು..

ಅಕ್ಕಿ ಪ್ರಿಯರಿಗೆ ಬಿಡುವ ಸಂಕಟ ಈ ತೆರನದ್ದಾದರೆ ಅಕ್ಕಿಯೇತರ ದವಸ ತಿನ್ನುವವರ ಧಾಟಿಯೇ ಬೇರೆ. ‘ನಿನ್ನಿಡೀ ಅನ್ನ, ಇವತ್ ಮದ್ಯಾಣನೂ ಅನ್ನ ಸಾರು, ರಾತ್ರಿಗೆ ಹೋದರೂ ಅದೇ ಇತ್ತು. ಬರಿ ಅದ್ನ ತಿಂದ್ರ ಕೈಕಾಲ್ ಸತು ಉಡುಗ್ಹೋಕಾವ ಅಂದ್ ಅಲ್ಲಿಂದೆದ್ದು ಇಲ್ ಬಂದೇನಿ ನೋಡು’ - ಇದು ಒಂದು ದಿನ ಬರಿ ಅನ್ನ ತಿಂದಿದ್ದಕ್ಕೆ ಕೈಕಾಲು ಶಕ್ತಿ ಉಡುಗೀತೆಂದು ಹೆದರಿ ಕುರಿ ತಲೆಯ ಊಟಕ್ಕೆ ಹೋದ ಜೋಳದ ಗೆಳೆಯನ ಮಾತು. ನನ್ನ ಪ್ರತಿಕ್ರಿಯೆ ಶುರುವಾಗುವ ಮೊದಲೇ ಬರುತ್ತದೆ, ‘ಅಕ್ಕಿ ತಿಂದ್ರ ಹಕ್ಕಿಯಾಕಾರ, ರಾಗಿ ತಿಂದ್ರ ನಿರೋಗಿಯಾಕಾರ, ಅದ ಜ್ವಾಳ ತಿಂದ್ರ ತೋಳನಂಗಾಕಾರಂತ ಗಾದಿನ ಐತಿ, ತಿಳಿದಿಲ್ಲೆನು ನಿನಗ?’ ಎಂಬ ಮರುಮಾತು.



ಈಗ ಕರಾವಳಿ, ಮಲೆನಾಡುಗಳಲ್ಲಿ ಎಲ್ಲಿ ನೋಡಿದರೂ ಎರಡು ತೆರನ ಹಸಿರು ಕಣ್ಣಿಗೆ ರಾಚುತ್ತದೆ - ಆಕಾಶದತ್ತ ಬೆಳೆದು ನಿಂತ ತೋಟದ ಹಸಿರು; ನೆಲಹಾಸಿನಂತಹ ಭತ್ತದ ಗದ್ದೆಯ ಹಸಿರು. ಎಲ್ಲಿ ಮಳೆ ಬರದಿದ್ದರೂ ಕರಾವಳಿ ಮತ್ತು ಮಲೆನಾಡುಗಳಲ್ಲಿ ಒಂದಷ್ಟು ಮಳೆ ಸುರಿಯುವುದು ನಿಶ್ಚಿತವಾದ್ದರಿಂದ ಮೇ, ಜೂನ್ ತಿಂಗಳಿನಿಂದಲೇ ಗದ್ದೆಯ ಕೆಲಸಗಳು ಶುರುವಾಗುತ್ತವೆ. ನೋಡನೋಡುತ್ತಿದ್ದಂತೆ ಬೇಸಿಗೆಗೆ ಒಣಗಿದ ಹೂಟೆಯಾದ ಗದ್ದೆ ಬಯಲುಗಳು ಒಂದೆರೆಡು ಗಟ್ಟಿ ಮಳೆಗೆ ಆಕಾಶ ಪ್ರತಿಫಲಿಸತೊಡಗುತ್ತವೆ. ನೀರಕನ್ನಡಿಯಂಥ ಗದ್ದೆ ಬಯಲುಗಳು ಭತ್ತ ಬೆಳೆವ ರೈತರ ಹಾಗೂ ಕೂಲಿಗಳ ಮುಂದಿನ ವರ್ಷದ ಭವಿಷ್ಯವನ್ನೂ ಬರೆಯುತ್ತವೆ.

ಗದ್ದೆ ಎಂದರೆ ಕೋಣ, ಎತ್ತುಗಳ ಬೆನ್ನತ್ತಿ ಹೂಟೆ ಹೂಡುವ ಅರೆನಗ್ನ ರೈತನ ಕನಸು. ಗದ್ದೆ ಎಂದರೆ ಸೊಂಟ ಮುರಿವಂತೆ ಬೆನ್ನು ಬಾಗಿಸಿ ನೇಜಿ ನೆಡುವ, ಕಳೆ ಕೀಳುವ, ಕೊಯ್ಯುವ, ಒಕ್ಕುವ ಹೆಂಗಸರು. ಗದ್ದೆ ಎಂದರೆ ಹುಲ್ಲು ಕಟ್ಟುವ ಗಡಿಬಿಡಿ. ಗದ್ದೆ ಎಂದರೆ ಕೊಯ್ಲಾದ ಪೈರು ಕಾಳು ಉದುರಿಸುವುದರೊಳಗೆ ಹೊಡೆಮಂಚಕ್ಕೇರಿಸುವ ಅವಸರ. ಕರಾವಳಿಯ ಗದ್ದೆಗೆ ಭತ್ತ ಬೇಯಿಸಿ, ಹರಡಿ ಒಣಗಿಸಿ, ಕುಚ್ಚಲಕ್ಕಿ ಮಾಡುವ ಹೊಣೆ. ಮತ್ತೆಲ್ಲ ಕಡೆ ವರ್ಷ ಪೂರ್ತಿ ಸಾಕಾಗುವಷ್ಟು ಅಕ್ಕಿ, ಅವಲಕ್ಕಿ ಮಾಡಿಸಿಡುವ ಜವಾಬ್ದಾರಿ. ಮುಡಿ, ತಿರಿ, ಕಣಗಳಲಿ ಸಂತೃಪ್ತ ಜೀವಗಳ ಹೆಮ್ಮೆ..

ಒಂದೇ ಎರಡೇ, ಗದ್ದೆಯೆಂದರೆ ನೆಲದ ಮೇಲೆ ಬೆವರು ಬಿಡಿಸುವ ಚಿತ್ತಾರದ ಕುಸುರಿಯ ಎಣೆಯಿಲ್ಲದ ನೆನಪು..

ಜನಸಂಖ್ಯೆಯಲ್ಲಿ ಹೇಗೋ ಹಾಗೆ, ಅಕ್ಕಿ ಬೆಳೆಯುವುದರಲ್ಲಿ, ತಿನ್ನುವುದರಲ್ಲಿ ಭಾರತಕ್ಕೆ ಚೀನಾ ನಂತರದ ಸ್ಥಾನ. ಅರ್ಧಕ್ಕರ್ಧ ಭಾರತದ ಜನ ಊಟಕ್ಕೆ ಬಳಸುವುದು ಅಕ್ಕಿಯನ್ನು. ನಮ್ಮ ಒಟ್ಟೂ ಕೃಷಿಯ ಕಾಲು ಭಾಗ ಭತ್ತ ಬೆಳೆಯೇ ಆಗಿದೆ. ಭಾರತದ ಪೂರ್ವ ಮತ್ತು ದಕ್ಷಿಣ ಭಾಗದ ಜನ ಊಟಕ್ಕೆ ಅಕ್ಕಿಯನ್ನೇ ಮುಖ್ಯ ಆಹಾರವಾಗಿ ಬಳಸುತ್ತಾರೆ. ಏಷ್ಯಾದ ೨೦೦ ಕೋಟಿ ಜನರ ಮುಖ್ಯ ಆಹಾರ, ಅವರ ೬೦-೭೦% ಕ್ಯಾಲೊರಿ ಪೂರೈಸುವ ಧಾನ್ಯ ಭತ್ತವೇ ಆಗಿದೆ. ಅದರಲ್ಲೂ ಮಳೆ ಬೀಳುವ ಪ್ರದೇಶಗಳಲ್ಲಿ ಭತ್ತ ಬೆಳೆಯುವುದೂ ಹೆಚ್ಚು, ಅಕ್ಕಿ ತಿನ್ನುವುದೂ ಹೆಚ್ಚು.



ಭತ್ತದ ಎರಡು ಮುಖ್ಯ ಪ್ರಬೇಧಗಳು ಏಷ್ಯಾದವೇ - ಇಂಡಿಕಾ, ಜಪಾನಿಕಾ. ಪ್ರಪಂಚದ ೮೭% ಅಕ್ಕಿ ಬೆಳೆಯುವವರು ಏಷ್ಯಾದ ರೈತರು. ಭತ್ತದ ಗದ್ದೆಗಳು ಹೆಚ್ಚು ಕಡಿಮೆ ಮುಕ್ಕಾಲು ಏಷ್ಯಾ ಖಂಡದ ಭೌಗೋಳಿಕ ಲಕ್ಷಣವಾಗಿವೆ. ಭತ್ತದ ಮೂಲ ಸಸ್ಯ ಚೀನಾದ ಯಾಂಗ್‌ತ್ಸೆ ನದಿಯ ದಕ್ಷಿಣದ ಕಡೆಯದು. ಮನುಷ್ಯ ನೆಲೆ ನಿಂತು ಸಾಗುವಳಿ ಶುರು ಮಾಡಿದ ಕೂಡಲೇ ಮೊದಲು ಬೆಳೆದಿದ್ದು ನೆಲ್ಲು ಹುಲ್ಲನ್ನು. ದನಕರುಗಳಿಗೆ ಮೇವು, ಮನುಷ್ಯರಿಗೆ ಅಕ್ಕಿ ಎರಡನ್ನೂ ಕೊಡುವ ಭತ್ತ ನದೀಬಯಲಿನ ಸಮುದಾಯಗಳ ಜನಪ್ರಿಯ ಬೆಳೆಯಾಯಿತು. ಸುಮಾರು ೧೦-೧೩ ಸಾವಿರ ವರ್ಷ ಕೆಳಗೆ ಭತ್ತ ಕುಟ್ಟಿ ಅಕ್ಕಿ ಮಾಡುವುದು ಹಾಗೂ ನಾಗರಿಕತೆ ರೂಪುಗೊಳ್ಳುವುದು ಎರಡೂ ಒಟ್ಟೊಟ್ಟಿಗೇ ಸಂಭವಿಸಿದವು. ಭಾರತದಲ್ಲಿ ಸಮುದ್ರಮಟ್ಟದಿಂದ ಹಿಡಿದು ೨೫೦೦ ಅಡಿ ಎತ್ತರದ ಪೀಠಭೂಮಿಗಳ ತನಕ ಎಲ್ಲೆಡೆ ಭತ್ತದ ಗದ್ದೆಗಳಿವೆ. ವಾರ್ಷಿಕ ೧೦೦-೨೦೦ ಸೆಂ.ಮೀ. ಮಳೆಯಾಗುವ ಪ್ರದೇಶಗಳಲ್ಲಿ, ನೀರಾವರಿ ಪ್ರದೇಶಗಳಲ್ಲಿ ಬೆಳೆಯುವ ಬೆಳೆ ಇದು. ಬಹಳ ಜನರಿಗೆ ಮುಖ್ಯ ಆಹಾರ ಮೂಲವಾಗಿರುವ ಅಕ್ಕಿ ಬೆಳೆಯಲು ಬಹಳ ಮಳೆ ಬೇಕು, ಬಹಳ ಕೂಲಿಗಳು ಬೇಕು, ಬಹಳ ಶ್ರಮ ಬೇಕು, ಬಹಳ ಶಾಖವೂ ಬೇಕು! ಭತ್ತದ ಕೃಷಿಗೆ ಬಹುಸಂಖ್ಯೆಯ ಶ್ರಮಿಕರು ಬೇಕಿರುವುದರಿಂದಲೇ ಜನ ಬಾಹುಳ್ಯವಿರುವ ಪ್ರದೇಶಗಳಲ್ಲೇ ಭತ್ತ ಬೆಳೆಯುತ್ತಾರೆ.

ಭತ್ತ ಕೃಷಿಯ ವಿಶೇಷತೆ ಸಸಿ ಕಿತ್ತು ನೆಡುವುದು. ಭತ್ತವನ್ನು ಎರಚಿಯೂ ಬಿತ್ತನೆ ಮಾಡುತ್ತಾರೆ, ಉತ್ತುವವರ ಹಿಂದೆ ಬಿತ್ತುತ್ತ ಹೋಗಿಯೂ ಬಿತ್ತನೆ ಮಾಡುತ್ತಾರೆ. ಮಳೆ ಹೆಚ್ಚು ಬೀಳದ, ಕೂಲಿ ಜನ ಹೆಚ್ಚು ಸಿಗದ ಕಡೆ ಈ ವಿಧಾನಗಳು ಜನಪ್ರಿಯವಾಗಿವೆಯಾದರೂ ಅದರಿಂದ ಇಳುವರಿ ಕಡಿಮೆ. ಈ ವಿಧಾನಗಳಿಗಿಂತ ಭಿನ್ನವಾಗಿ ಸಸಿಮಡಿಗಳಿಂದ ಗಿಡಕಿತ್ತು ನೆಡುವುದಕ್ಕೆ ಹೆಚ್ಚು ಕೂಲಿ ಕಾರ್ಮಿಕರು ಬೇಕಾದರೂ ಅದರಿಂದ ಇಳುವರಿ ಹೆಚ್ಚು. ಸಾಲುಗಳ ನಡುವೆ ಕಳೆ ನಿಯಂತ್ರಣವೂ ಸುಲಭ.

ಭತ್ತ ಒಂದು ತೆರನ ಜಲಚರ ಸಸ್ಯ. ಬಿತ್ತನೆ ಹಾಗೂ ನೆಟ್ಟಿ ಸಮಯದಲ್ಲಿ ೨-೩ ಇಂಚು ನೀರು ಗದ್ದೆಯಲ್ಲಿ ನಿಂತಿರಬೇಕಾಗುತ್ತದೆ. ಬೆಟ್ಟ ಪ್ರದೇಶಗಳಲ್ಲಿ ನೆಲವನ್ನು ಸಣ್ಣ ಸಣ್ಣ ಹಾಳೆಗಳಂತೆ ಸಮತಟ್ಟಾಗಿಸಿ ಭತ್ತ ಬೆಳೆಯಲಾಗುತ್ತದೆ. ಅತಿ ಹೆಚ್ಚು ಮಳೆಬೀಳುವ ಗುಡ್ಡಗಾಡುಗಳಲ್ಲೂ ಭತ್ತ ಬೆಳೆಯುತ್ತದೆ. ಕಡಲ ತಡಿಯ ಉಪ್ಪುನೀರಿನ ಗಜನಿಯಲ್ಲೂ ‘ಕಗ್ಗ’ ಮತ್ತಿತರ ತಳಿಗಳ ನೆಲ್ಲು ಬೆಳೆಯುತ್ತದೆ. ಪ್ರಪಂಚದಲ್ಲಿ ೧೦೦೦೦ಕ್ಕೂ ಮಿಕ್ಕಿ ಭತ್ತದ ತಳಿಗಳಿದ್ದು ಅದರಲ್ಲಿ ಭಾರತವೊಂದರಲ್ಲೇ ೪೦೦೦ ಭಿನ್ನ ತಳಿಗಳನ್ನು ಬೆಳೆಯಲಾಗುತ್ತದೆ. ಈ ಎಲ್ಲ ವರ್ಷಗಳಲ್ಲಿ ಆಯಾಯಾ ಮಣ್ಣಿಗೆ, ಅಲ್ಲಲ್ಲಿನ ಪರಿಸ್ಥಿತಿಗೆ ತಕ್ಕಂತೆ ತಳಿಗಳನ್ನು ಉಳಿಸಿ, ಬೆಳೆಸಿ ರೈತರು ಕಾಪಿಟ್ಟುಕೊಂಡು ಬಂದಿದ್ದಾರೆ. ಆದರೆ ಗದ್ದೆ ಬೇಸಾಯ ಮಾಡುವ ಯಾರನ್ನೇ ಕೇಳಿದರೂ ಬೇಸಾಯ ಅವರನ್ನೆಷ್ಟು ಹೈರಾಣಾಗಿಸಿದೆ ಎಂದು ತಿಳಿಯುತ್ತದೆ. ಅದರಲ್ಲೂ ಕೃಷಿ ಕಾರ್ಮಿಕರ ಕೊರತೆ ಗದ್ದೆ ಮಾಲೀಕರನ್ನು ಯಂತ್ರಗಳಿಗೆ ಮೊರೆ ಹೋಗುವಂತೆ, ಅದಕ್ಕಾಗಿ ಸಾಲ ಮಾಡುವಂತೆ ಮಾಡಿದೆ.


ಭಾರತದಲ್ಲಿ ಹಸಿರು ಕ್ರಾಂತಿಯ ನಂತರ ಭತ್ತದ ಇಳುವರಿ ನಾಲ್ಕು ಪಟ್ಟು ಹೆಚ್ಚಿದೆ. ಆದರೂ ಈಗ ಪ್ರತಿ ಹೆಕ್ಟೇರಿಗೆ ಇಳುವರಿ ೨೦೫೦ ಕೆಜಿ ಇದ್ದರೆ ಚೀನಾ-ಅಮೆರಿಕಗಳಲ್ಲಿ ೪೭೭೦ ಕೆಜಿ, ಜಪಾನಿನಲ್ಲಿ ೬೨೪೬ ಕೆಜಿ ಹಾಗೂ ಕೊರಿಯಾದಲ್ಲಿ ೬೫೫೬ ಕೆಜಿ ಇದೆ! ಸಣ್ಣ ಕೃಷಿಕ್ಷೇತ್ರ ಹಾಗೂ ಪಾರಂಪರಿಕ ಬೆಳೆ ವಿಧಾನಗಳು ಇದಕ್ಕೆ ಕಾರಣವೆಂದು ದೂರಲಾಗುತ್ತಿದ್ದರೂ ರೈತರ ಪಾರಂಪರಿಕ ಜ್ಞಾನವನ್ನು ಆಧುನಿಕ ವಿಜ್ಞಾನದ ಜೊತೆಗೆ ಬೆಸೆಯಲು ವಿಫಲವಾಗಿರುವುದು ಇದಕ್ಕೆ ಕಾರಣವಾಗಿದೆ. ಇಳುವರಿ ಕಡಿಮೆಯಾಗಿ ನಷ್ಟ ಅನುಭವಿಸುವ ರೈತರು ಬೇರೆ ಬೆಳೆಗಳತ್ತ, ಅದರಲ್ಲೂ ಕಬ್ಬಿನಂತಹ ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾಗಿ ಬೇರೆಬೇರೆ ಸಮಸ್ಯೆಗಳು ತಲೆದೋರತೊಡಗಿವೆ. ನೀರಾವರಿ ಪ್ರದೇಶ ಹೊರತುಪಡಿಸಿ ಉಳಿದೆಡೆ ಭತ್ತ ಬೆಳೆಯುವ ಹುಕಿ ಕಡಿಮೆಯಾಗುತ್ತಿದೆಯೆ ಎಂಬ ಅನುಮಾನ ಕೆಲವರಿಗಿದೆ. ಅದಕ್ಕೆ ಸರಿಯಾಗಿ ಕರಾವಳಿಯಲ್ಲಿ ಭತ್ತದ ಗದ್ದೆಗಳ ವಿಸ್ತೀರ್ಣ ಬರಬರುತ್ತ ಕಡಿಮೆಯಾಗಿದೆಯೆಂದು ಈಗ ನಾವು ಓಡಾಡುವ ಸಪಾಟು ರಸ್ತೆಗಳು, ಸೈಟುಗಳು, ಬಡಾವಣೆಗಳ ಪೂರ್ವೇತಿಹಾಸ ತೋರಿಸಿ ಹಿರಿಯರು ಹೇಳುತ್ತಾರೆ. ಅವೆಲ್ಲ ಒಂದು ಕಾಲದಲ್ಲಿ ಗದ್ದೆಯಾಗಿದ್ದವು. ‘ಗದ್ದೆ ಎಲ್ಲ ಸೈಟ್ ಆಗಿ, ಅಕ್ಕಿ ಬೆಳೆ ಈಗ ಕಮ್ಮಿಯಾಗಿರುವುದೇ ಅಕ್ಕಿಗೆ ಈ ಪರಿ ಬೆಲೆಯಾಗಲು ಕಾರಣ’ ಎಂದು ಹೇಳುವವರ ಆತಂಕ ನಾವು ಊಟದಕ್ಕಿ ಕೆಜಿಗೆ ೫೦-೬೦ ರೂಪಾಯ್ ತೆರುವಾಗ ಅರ್ಥವಾಗುತ್ತದೆ.

ವೈವಿಧ್ಯವೇ ಆರೋಗ್ಯ

ಈ ಬರಹದ ಉದ್ದೇಶ ಭತ್ತ, ಅಕ್ಕಿಯ ಮಹಿಮೆಯನ್ನು ಹಾಡಿ ಹೊಗಳುವುದಲ್ಲ; ತಿನ್ನುವ ವಸ್ತುವಿನ ಕುರಿತು ಇರುವ ಇಲ್ಲಸಲ್ಲದ ವಿಧಿನಿಷೇಧ, ಪೂರ್ವಗ್ರಹಗಳನ್ನು ಓಡಿಸುವುದು. ಅಕ್ಕಿಯಷ್ಟೇ ಅಲ್ಲ, ಯಾವುದೇ ದವಸವಾಗಲಿ, ಅದನ್ನಷ್ಟೇ ತಿಂದರೆ ಎಲ್ಲ ಜೀವಸತ್ವಗಳೂ ಸಿಗಲು ಸಾಧ್ಯವಿಲ್ಲ. ನಿತ್ಯದ ಆಹಾರದಲ್ಲಿ ಕನಿಷ್ಠ ಐದು ವೈವಿಧ್ಯಗಳಾದರೂ ಇರಬೇಕು. ತರಕಾರಿ, ಹಣ್ಣು, ದವಸ, ಧಾನ್ಯ, ಮಾಂಸ ಇತ್ಯಾದಿ ಆಯ್ಕೆಯ ವೈವಿಧ್ಯಗಳಲ್ಲಿ ನಮ್ಮ ರುಚಿ, ನಾಲಗೆಯ ಅವಶ್ಯಕತೆಗೆ ತಕ್ಕಂತೆ ಆಹಾರ ಕ್ರಮ ರೂಢಿಸಿಕೊಳ್ಳಬೇಕು.

ಉಸಿರಾಟ, ಜೀರ್ಣಕ್ರಿಯೆ, ಚಲನೆ ಸೇರಿದಂತೆ ಎಲ್ಲ ದೈಹಿಕ ಕ್ರಿಯೆಗಳು ನಡೆಯಲು, ದೇಹವೆಂಬ ಯಂತ್ರ ಕೆಲಸ ಮಾಡಲು, ಇಂಧನ ಬೇಕು. ಹಾಗೆ ತಕ್ಷಣಕ್ಕೆ ಒದಗಿಬರುವ ಇಂಧನ ಕಾರ್ಬೋಹೈಡ್ರೇಟು (ಶರ್ಕರಪಿಷ್ಠ). ಸುಲಭದಲ್ಲಿ ಜೀರ್ಣವಾಗುವ, ದೇಹಕ್ಕೆ ಕ್ಯಾಲೊರಿ ನೀಡಬಲ್ಲ, ಕರುಳ ಚಲನೆ ಸುಗಮಗೊಳಿಸಬಲ್ಲ ಕಾರ್ಬೋಹೈಡ್ರೇಟು ಅನ್ನದಲ್ಲಿದೆ. ಆದರೆ ಭಾರತೀಯರ ಆಹಾರಕ್ರಮದ ಅವೈಜ್ಞಾನಿಕತೆ ಹಾಗೂ ಜೀವನಶೈಲಿಯ ಕಾರಣದಿಂದ ಬೊಜ್ಜು ಕಂಡುಬರುತ್ತಿದೆ. ಬೊಜ್ಜು ಬೆಳೆಸಿರುವವರು ಅನ್ನ ತಿಂದು ಹಾಗಾಯಿತೆನ್ನುತ್ತಾರೆ. ಪೂರ್ವಗ್ರಹ ತುಂಬಿದ ಇಷ್ಟಾನಿಷ್ಟಗಳು ಮತ್ತು ದೈಹಿಕ ಶ್ರಮರಹಿತ ಜೀವನಶೈಲಿ ಅಪೌಷ್ಟಿಕತೆ ಮತ್ತು ಬೊಜ್ಜು ಎಂಬ ಆಹಾರಸೇವನೆಯ ಎರಡು ಅತಿಗಳಿಗೆ ಕಾರಣವಾಗಿದೆಯೇ ಹೊರತು ಅದರಲ್ಲಿ ಅನ್ನದ ಪಾತ್ರವಿಲ್ಲ.

ಸ್ಥಳೀಯವಾಗಿ ನಾವು ಬಳಸುವ ಆಹಾರ, ತಯಾರಿಕಾ ವಿಧಾನಗಳು ಸಾವಿರಾರು ವರ್ಷಗಳಿಂದ ನಮ್ಮ ಹಿರೀಕರು, ಅಜ್ಜಿ-ಅಮ್ಮಂದಿರು ಸರಿತಪ್ಪು ಪ್ರಯೋಗಗಳ ಮೂಲಕ ಉಳಿಸಿಕೊಂಡು ಬಂದಿರುವಂಥವು. ಅಕ್ಕಿ ಇಂದಿಗೂ ಬಳಕೆಯಲ್ಲಿ ಉಳಿದಿದ್ದರೆ ಅದು ಅಂಥ ಎಷ್ಟೋ ಅಸಂಖ್ಯ ಪ್ರಯೋಗಗಳ ನಂತರವೇ. ಎಂದೇ ‘ಅಕ್ಕಿ ತಿಂದರೆ ಡಯಾಬಿಟಿಸ್ ಬರುತ್ತದೆ’, ‘ಅಕ್ಕಿ ತಿಂದರೆ ಶಕ್ತಿ ಇರುವುದಿಲ್ಲ’ ಎಂಬ ಕಟ್ಟುಕತೆಗಳನ್ನೆಲ್ಲ ನಂಬದೆ ಮಿಶ್ರಾಹಾರ ಸಮತೋಲನ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಹಾಗೂ ಬೆವರು ಹರಿಸಿದಷ್ಟೆ ಉಣುವುದು ಆರೋಗ್ಯಕರ ಬದುಕಿನ ಗುಟ್ಟು ಎನ್ನಬಹುದಾಗಿದೆ.